ಕೋಲ್ಕೊತಾ: ಜೀವನದಲ್ಲಿ ಎಲ್ಲ ಕ್ರೀಡಾ ಪಟುಗಳಿಗೂ ತಮ್ಮ ನೆಚ್ಚಿನ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಬಯಕೆ ಇರುತ್ತದೆ. ಈ ಹಾದಿಯಲ್ಲಿ ಕೆಲವರು ಯಶಸ್ಸು ಕಂಡರೆ ಇನ್ನು ಕೆಲವರು ವೈಫಲ್ಯ ಕಾಣುತ್ತಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಫುಟ್ಬಾಲ್(Poulami Adhikari) ಆಟಗಾರ್ತಿಯೊಬ್ಬಳು ಫುಡ್ ಡೆಲಿವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಅಪಾರ ಪ್ರತಿಭೆ ಇದ್ದರೂ ಕೂಡ ಇವರಿಗೆ ಅಡ್ಡಿಯಾಗಿದ್ದು ಕಡು ಬಡತನ. ಇದೇ ಕಾರಣಕ್ಕೆ ಅವರು ಜೀವನೋಪಾಯಕ್ಕಾಗಿ ಈ ವೃತ್ತಿಯಲ್ಲಿ ತೊಡಗಿದ್ದಾರೆ.
ಪಶ್ಚಿಮ ಬಂಗಾಳದ ಪೌಲಮಿ ಅಧಿಕಾರಿ 16 ವಯಸ್ಸಿನೊಳಗಿನ ಭಾರತ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ಈಗ ಝೊಮ್ಯಾಟೊ ಫುಡ್ ಡೆಲಿವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ ರೂ. 300 ರಿಂದ 400ರೂ ಗಳಿಸುತ್ತಿದ್ದಾರೆ. ನಾನು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಬ್ರಿಟನ್, ಜರ್ಮನಿ ಮತ್ತು ಶ್ರೀಲಂಕಾ ದೇಶಗಳಿಗೆ ಪ್ರವಾಸ ಮಾಡಿದ್ದೆ ಎಂದು ಪೌಲಮಿ ವಿಡಿಯೊದಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೌಲಮಿ ಅಧಿಕಾರಿಯ ಈ ಕಷ್ಟದ ಕಥೆಯನ್ನು ತಿಳಿದ ಅನೇಕರು ಇದೀಗ ಆಕೆಗೆ ನೆರವು ನೀಡಲು ಮುಂದಾಗಿದ್ದಾರೆ. ಜತೆಗೆ ಅವರು ಫುಟ್ಬಾಲ್ ಕ್ರೀಡೆಯನ್ನು ಮುಂದುವರಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿರುವ ಪೌಲಮಿ ಅಧಿಕಾರಿ, ತನ್ನ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದಾರೆ. ಇದೇ ಕಾರಣದಿಂದ ಅವರು ನೆಚ್ಚಿನ ಕ್ರೀಡೆಯಿಂದ ದೂರ ಉಳಿದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಈ ಫುಟ್ಬಾಲ್ ಆಟಗಾರ್ತಿ ಸದ್ಯ ಚಾರುಚಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಜತೆಗೆ ಫುಡ್ ಡೆಲಿವರಿ ಕಾರ್ಯದಲ್ಲಿಯೂ ತೊಡಿದ್ದಾರೆ.
ಇದನ್ನೂ ಓದಿ | Viral Video | ಅಫಘಾನಿಸ್ತಾನದ ಈ ಪುಟಾಣಿಯ ನಗುವಿಗೆ ಮನಸೋಲದವರಿಲ್ಲ; ವಿಡಿಯೊ ವೈರಲ್