Site icon Vistara News

Asia cup- 2022 | ಇಂದಿನಿಂದ ಏಷ್ಯಾ ಕಪ್‌ ಮಿನಿ ಕ್ರಿಕೆಟ್‌ ಸಮರ ಶುರು, ಎಲ್ಲರ ಕಣ್ಣು ಪ್ರಶಸ್ತಿ ಕಡೆಗೆ

Asia Cup- 2022

ದುಬೈ : ಅನಿಶ್ಚಿತ ಫಲಿತಾಂಶ ನೀಡುವ ಹೊರತಾಗಿಯೂ ಅಷ್ಟೇ ಜನಪ್ರಿಯತೆಯನ್ನು ಪಡೆದಿರು ಟಿ೨೦ ಮಾದರಿಯಲ್ಲಿ ಆಯೋಜನೆಗೊಂಡಿರುವ ಏಷ್ಯಾ ಕಪ್‌ (Asia cup- 2022) ಕ್ರಿಕೆಟ್ ಮಿನಿ ಸಮರಕ್ಕೆ ಶನಿವಾರ ಸಂಜೆ ಚಾಲನೆ ಸಿಗಲಿದೆ. ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಟೂರ್ನಿಯು ಯುಎಇನ ಎರಡು ಸ್ಟೇಡಿಯಮ್‌ಗಳಲ್ಲಿ ನಡೆಯಲಿದ್ದು, ಸೆಪ್ಟೆಂಬರ್‌ ೧೧ರಂದು ಫೈನಲ್ ಪಂದ್ಯ ನಡೆಯಲಿದೆ. ಅದಕ್ಕಿಂತ ಮೊದಲು ಆರು ಗುಂಪ ಹಂತದ ಪಂದ್ಯಗಳು ಹಾಗೂ ಆರು ಸೂಪರ್‌ ಫೋರ್‌ ಪಂದ್ಯಗಳು ಸೇರಿದಂತೆ ಒಟ್ಟಾರೆ ೧೨ ಪಂದ್ಯಗಳು ಆಯೋಜನೆಗೊಂಡಿವೆ.

ಶನಿವಾರ ರಾತ್ರಿ (ಆಗಸ್ಟ್‌ ೨೭) ೭.೩೦ಕ್ಕೆ ಬಿ ಗುಂಪಿನಲ್ಲಿರುವ ಆತಿಥೇಯ ಶ್ರೀಲಂಕಾ ಹಾಗೂ ಅಫಘಾನಿಸ್ತಾನ ತಂಡಗಳ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ೩೮ ವರ್ಷದ ಇತಿಹಾಸವನ್ನು ಹೊಂದಿರುವ ಈ ಟೂರ್ನಿಯ ಹಾಲಿ ಆವೃತ್ತಿಯಲ್ಲಿ ಏಷ್ಯಾ ಖಂಡದ ಅಗ್ರ ಆರು ದೇಶಗಳು ಪಾಲ್ಗೊಳ್ಳಲಿವೆ.

ಎ ಗುಂಪಿನಲ್ಲಿ ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ತಾನವಿದ್ದು, ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಹಾಂಕಾಂಗ್ ಮೂರನೇ ತಂಡವಾಗಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡವಿದೆ.

ಗುಂಪು ಹಂತದಲ್ಲಿ ಪ್ರತಿ ತಂಡ ಗುಂಪಿನ ಇತರ ಎರಡು ತಂಡಗಳೊಂದಿಗೆ ಒಂದು ಬಾರಿ ಮುಖಾಮುಖಿಯಾಗಲಿವೆ. ಒಟ್ಟಾರೆ ಅರು ಗುಂಪು ಹಂತದ ಪಂದ್ಯಗಳಲ್ಲಿ, ಪ್ರತಿ ಗುಂಪಿನ ಎರಡು ಅಗ್ರ ತಂಡಗಳು ಸೂಪರ್‌ ಫೋರ್ ಹಂತಕ್ಕೆ ತೇರ್ಗಡೆಯಾಗಲಿವೆ. ಇಲ್ಲಿಯೂ ಆರು ಪಂದ್ಯಗಳು ನಡೆದು ಅಗ್ರ ಎರಡು ತಂಡಗಳು ಫೈನಲ್‌ಗೆ ಪ್ರವೇಶಿಸಲಿವೆ.

ಇದು ೧೫ನೇ ಆವೃತ್ತಿಯ ಟೂರ್ನಿಯಾಗಿದ್ದು, ಟಿ೨೦ ವಿಶ್ವ ಕಪ್‌ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ಏಷ್ಯಾ ಕಪ್‌ ಅನ್ನು ಟಿ೨೦ ಮಾದರಿಯಲ್ಲಿ ಆಯೋಜಿಸಲಾಗಿದೆ. ೨೦೧೬ರಲ್ಲಿಯೂ ಟಿ೨೦ ಮಾದರಿಯಲ್ಲೇ ನಡೆದಿತ್ತು. 2018ರ ಆವೃತ್ತಿಯ ಭಾರತದ ಆತಿಥ್ಯದಲ್ಲಿ ದುಬೈನಲ್ಲಿ ಆಯೋಜನೆಗೊಂಡಿತ್ತು. ಅದು ಏಕ ದಿನ ಮಾದರಿಯಲ್ಲಿ ಆಯೋಜನೆಗೊಂಡಿದೆ. ಆದರೆ, ೨೦೨೦ರ ಆವೃತ್ತಿ ಕೊರೊನಾ ಕಾರಣಕ್ಕೆ ಮುಂದೂಡಿಕೆಯಾಗಿ ಇದೀಗ ನಡೆಯುತ್ತಿದೆ. ಹಾಲಿ ಟೂರ್ನಿಯ ಆತಿಥ್ಯ ಶ್ರೀಲಂಕಾ ತಂಡಕ್ಕೆ ಲಭಿಸಿತ್ತು. ಆದರೆ, ಅಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿರುವ ಕಾರಣ ಯುಎಇಗೆ ಟೂರ್ನಿಯನ್ನು ಸ್ಥಳಾಂತರ ಮಾಡಲಾಗಿದೆ.

ಏಷ್ಯಾ ಕಪ್‌ನಲ್ಲಿ ಭಾರತ ಇದುವರೆಗೆ ಏಳು ಬಾರಿ ಚಾಂಪಿಯನ್‌ಪಟ್ಟ ಅಲಂಕರಿಸಿದೆ. ಶ್ರೀಲಂಕಾ ತಂಡದ ಐದು ಬಾರಿ ಪ್ರಶಸ್ತಿ ಗೆದ್ದಿದ್ದು, ಪಾಕಿಸ್ತಾನಕ್ಕೆ ಎರಡು ಟ್ರೋಫಿಗಳು ಲಭಿಸಿವೆ.

ಇದನ್ನೂ ಓದಿ | Asia Cup- 2022 | ಎಲ್ಲೆಲ್ಲಿ ನಡೆಯುತ್ತವೆ ಏಷ್ಯಾ ಕಪ್ ಪಂದ್ಯಗಳು, ವೇಳಾಪಟ್ಟಿ ಇಂತಿದೆ

Exit mobile version