ನವ ದೆಹಲಿ : Legends League cricket ೨೦೨೨ನೇ ಆವೃತ್ತಿಯಲ್ಲಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಪಾಲ್ಗೊಳ್ಳಲಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಮೂಲಕವೇ ಭಾರತ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದ ಅವರು ನಿವೃತ್ತಿ ಬಳಿಕ ರಾಜಕೀಯಕ್ಕೆ ಧುಮುಕಿದ್ದು, ನವ ದೆಹಲಿಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರು ಹಿರಿಯ ಕ್ರಿಕೆಟ್ ಟೂರ್ನಿಯ ಮೂಲಕ ಬ್ಯಾಟ್ ಹಿಡಿಯಲು ಮುಂದಾಗಿದ್ದಾರೆ.
ಅವರು ಈ ಸುದ್ದಿಯನ್ನು ಖಾತರಿಪಡಿಸಿದ್ದು, ಮುಂದಿನ ಆವೃತ್ತಿಯ Legends League ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದೇನೆ. ಸೆಪ್ಟೆಂಬರ್ ೧೭ರಿಂದ ಟೂರ್ನಿ ನಡೆಯಲಿದ್ದು, ಆ ಮೂಲಕ ಕ್ರಿಕೆಟ್ ಅಂಗಣಕ್ಕೆ ಮತ್ತೆ ಇಳಿಯಲಿದ್ದೇನೆ ಎಂದು ಹೇಳಿದ್ದಾರೆ. ವಿಶ್ವ ಕ್ರಿಕೆಟ್ ಕ್ಷೇತ್ರಕ್ಕೆ ಮತ್ತೊಮ್ಮೆ ಇಳಿಯುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಗಂಭೀರ್ ಹೇಳಿದ್ದಾರೆ.
ಗೌತಮ್ ಗಂಭೀರ್ ಅವರು ಎರಡು ವಿಶ್ವ ಕಪ್‌ಗಳನ್ನು ಗೆದ್ದ ಭಾರತ ತಂಡದ ಸದಸ್ಯರಾಗಿದ್ದಾರೆ. ೨೦೦೭ರ ಟಿ೨೦ ವಿಶ್ವ ಕಪ್‌ನಲ್ಲಿ ಅವರು ಆಡಿದ್ದರೆ, ೨೦೧೧ರ ಏಕ ದಿನ ವಿಶ್ವ ಕಪ್‌ನ ಫೈನಲ್‌ನಲ್ಲಿ ಅವರು ಬಾರಿಸಿದ ೯೭ ರನ್‌ಗಳು ಭಾರತ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ೧೪೭ ಏಕ ದಿನ ಪಂದ್ಯಗಳು, ೩೭ ಟಿ೨೦ ಪಂದ್ಯಗಳಲ್ಲಿ ಪಾಲ್ಗೊಂಡಿರುವ ಗೌತಮ್ ಗಂಭೀರ್ ಅವರು ೬೦೦೦ಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿರುವ ಅವರು ೨೦೧೨ ಹಾಗೂ ೨೦೧೪ರಲ್ಲಿ ಚಾಂಪಿಯನ್ ಪಟ್ಟ ಗೆದ್ದ ತಂಡ ನಾಯಕರಾಗಿದ್ದರು.
“೨೦೧೧ರ ವಿಶ್ವ ಕಪ್‌ನಲ್ಲಿ ಗೌತಮ್ ಗಂಭೀರ್ ಬಾರಿಸಿದ ೯೭ ರನ್‌ಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಫೀಲ್ಡ್ ಗೆ ಇಳಿಯುವುದನ್ನು ಸಾಕಷ್ಟು ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ,” ಎಂದು Legends League ಕ್ರಿಕೆಟ್‌ನ ಸಿಇಒ ರಮಣ್ ರಹೇಜಾ ಹೇಳಿದ್ದಾರೆ.
ಹಿರಿಯರ ದಂಡು
Legends League ಕ್ರಿಕೆಟ್‌ನಲ್ಲಿ ಹಿರಿಯ ಕ್ರಿಕೆಟಿಗರ ದಂಡು ಪಾಲ್ಗೊಳ್ಳಲಿದೆ. ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಶೇನ್ ವಾಟ್ಸನ್, ಬ್ರೆಟ್ ಲಿ, ಮೊಹಮ್ಮದ್ ಕೈಪ್, ಇರ್ಫಾನ್ ಪಠಾಣ್, ಮುತ್ತಯ್ಯ ಮುರಳೀಧರನ್, ಜಾಕ್ ಕಾಲಿಸ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಕೋಲ್ಕೊತಾ, ಹೊಸ ದಿಲ್ಲಿ, ಕಟಕ್, ಲಖನೌ, ಜೋಧ್‌ಪುರ ಮತ್ತು ರಾಜ್‌ಕೋಟ್‌ನಲ್ಲಿ ಮುಂದಿನ ಆವೃತ್ತಿಯ ಟೂರ್ನಿ ನಡೆಯಲಿದೆ.
ಇದನ್ನೂ ಓದಿ | legends cricket league | ಮತ್ತೊಮ್ಮೆ ಭಾರತ ತಂಡಕ್ಕೆ ನಾಯಕರಾದ ದಾದಾ!