ನವ ದೆಹಲಿ : ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರಿಗೆ ಟೀಮ್ ಇಂಡಿಯಾದಲ್ಲಿ ಮೊದಲ ಟಾರ್ಗೆಟ್ ವಿರಾಟ್ ಕೊಹ್ಲಿ. ಅಂತೆಯೇ ಅವರು ಮತ್ತೊಮ್ಮೆ ಕೊಹ್ಲಿಯನ್ನು ಮುಂದಿಟ್ಟುಕೊಂಡು ಕ್ರಿಕೆಟ್‌ನಲ್ಲಿ ಸಾಧನೆ ಗುರುತಿಸುವಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಿದ್ದಾರೆ. ವ್ಯಕ್ತಿ ಪೂಜೆಯನ್ನು ಮಾಡಬೇಡಿ, ಎಲ್ಲರ ಕೊಡುಗೆಗಳನ್ನು ಪ್ರಶಂಸಿಸಿ ಎಂಬುದಾಗಿಯೂ ಅವರು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂದರ್ಶನ ನೀಡಿದ ಅವರು ವಿರಾಟ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಅಫಘಾನಿಸ್ತಾನ ತಂಡದ ವಿರುದ್ಧ ಬಾರಿಸಿದ್ದ ಶತಕವನ್ನು ಉಲ್ಲೇಖಿಸಿ, ಅಂದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಐದು ವಿಕೆಟ್ ಕಬಳಿಸಿದ್ದರು. ಆದರೆ ಅದನ್ನು ಯಾರೂ ಕೊಂಡಾಡಿಯೇ ಇಲ್ಲ ಎಂಬುದಾಗಿ ಹೇಳಿದ್ದಾರೆ.
ಅಂದಿನ ಪಂದ್ಯ ಭಾರತಕ್ಕೆ ಪ್ರಮುಖವಾಗಿರಲಿಲ್ಲ. ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡ ಅದಾಗಲೇ ಫೈನಲ್‌ಗೆ ಪ್ರವೇಶ ಪಡೆದಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ (೧೨೨) ಶತಕ ಬಾರಿಸಿದ್ದರು. ಅದಕ್ಕಾಗಿ ಅವರನ್ನು ಇಡೀ ಪಂದ್ಯದ ಹೀರೋ ಎಂಬುದಾಗಿ ಗುರುತಿಸಲಾಯಿತು. ಆದರೆ, ಅದೇ ಪಂದ್ಯದಲ್ಲಿ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಮೀರತ್‌ನ ಹಳ್ಳಿಯೊಂದರಿಂದ ಬಂದ ಬೌಲರ್ ಭುವನೇಶ್ವರ್ ಕುಮಾರ್ ಐದು ವಿಕೆಟ್ ಕಬಳಿಸಿದ್ದರು. ಆದರೆ, ಎಲ್ಲರೂ ಕೊಹ್ಲಿಯನ್ನು ಹೊಗಳಿ, ಪಂದ್ಯದ ಗೆಲುವಿನ ಶ್ರೇಯಸ್ಸನ್ನು ಅವರಿಗೆ ಅರ್ಪಿಸಿದರೇ ಹೊರತು, ಭುವನೇಶ್ವರ್ ಅವರ ಸಾಧನೆಯನ್ನೂ ಯಾರು ಸ್ಮರಿಸಲಿಲ್ಲ. ಅಂದು ಭುವಿ ಬಗ್ಗೆ ಮಾತನಾಡಿದ್ದು ನಾನೊಬ್ಬನೇ ಎಂದು ಹೇಳಿದರು.
೧೯೮೩ರಿಂದ ಆರಂಭ
ವ್ಯಕ್ತಿ ಪೂಜೆ ಭಾರತೀಯ ಕ್ರಿಕೆಟ್‌ನಲ್ಲಿ ಹೊಸತಲ್ಲ ಎಂಬುದಾಗಿಯೂ ಅವರು ಇದೇ ವೇಳೆ ನುಡಿದರು. ೧೯೮೩ರ ವಿಶ್ವ ಕಪ್‌ನಿಂದಲೂ ಇದು ನಡೆದಿದೆ. ವಿಶ್ವ ಕಪ್ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಕಪಿಲ್ ದೇವ್ ಅವರಿಗೆ ನೀಡಲಾಗಿದೆ. ಹಾಗಾದರೆ ವಿಶ್ವ ಕಪ್‌ನಲ್ಲಿ ಅವರೊಬ್ಬರೇ ಆಡಿದರೇ, ಉಳಿದವರು ಆಡಿಲ್ಲವೇ? ೨೦೦೭ರ ಟಿ೨೦ ವಿಶ್ವ ಕಪ್ ಹಾಗೂ ೨೦೧೧ರ ಏಕ ದಿನ ವಿಶ್ವ ಕಪ್ ಗೆಲುವಿನಲ್ಲಿ ಧೋನಿಯೊಬ್ಬರನ್ನೇ ಹೊಗಳಲಾಗುತ್ತಿದೆ. ಈ ಎರಡೂ ಟೂರ್ನಿಗಳ ಸಾಧನೆಯಲ್ಲಿ ಉಳಿದವರ ಕೊಡುಗೆಯೂ ಇದೆ ಎಂಬುದನ್ನು ಯಾಕೆ ಮರೆತಿದ್ದೇವೆ ಎಂದು ಗಂಗೂಲಿ ಪ್ರಶ್ನಿಸಿದ್ದಾರೆ.
೨೦೧೧ರ ಏಕ ದಿನ ವಿಶ್ವ ಕಪ್‌ನ ಫೈನಲ್‌ನಲ್ಲಿ ಗೌತಮ್ ಗಂಭೀರ್ ೧೨೨ ಎಸೆತಗಳಿಗೆ ೯೭ ರನ್ ಬಾರಿಸಿದ್ದರು. ಅದೇ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ ೯೧ ರನ್ ಬಾರಿಸಿದ್ದರಲ್ಲದೆ, ಕೊನೆಯಲ್ಲಿ ಸಿಕ್ಸರ್ ಬಾರಿಸಿ ಕಪ್ ಗೆದ್ದುಕೊಟ್ಟಿದ್ದರು. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಇಂದಿಗೂ ಪಂದ್ಯದ ಗೆಲುವಿನ ಕ್ರೆಡಿಟ್ ಅನ್ನು ಧೋನಿಗೆ ನೀಡುತ್ತಿದ್ದಾರೆ. ಅದನ್ನು ಗಂಭೀರ್ ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ | Virat kohli | ಶತಕ ಬಾರಿಸಿದರೂ ವಿರಾಟ್ ಕೊಹ್ಲಿಯ ಟೀಕೆ ನಿಲ್ಲಿಸಲಿಲ್ಲ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್!