Site icon Vistara News

IND vs PAK | ಕೊಹ್ಲಿಯನ್ನು ನೋಡಿ ಕಲಿಯಿರಿ ಎಂದು ಸೂರ್ಯಕುಮಾರ್‌ ಮತ್ತು ಪಂತ್‌ಗೆ ಪಾಠ ಹೇಳಿದ ಗಂಭೀರ್‌

Gambhir

ದುಬೈ : ಕೊಹ್ಲಿ ವಿರುದ್ಧದ ಟೀಕಾಕಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೆಂದರೆ ಮಾಜಿ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌. ಸಣ್ಣ ಪುಟ್ಟ ಕಾರಣಗಳಿಗೂ ವಿರಾಟ್‌ ಕೊಹ್ಲಿಯ ಬದ್ಧತೆಯನ್ನು ಪ್ರಶ್ನಿಸುತ್ತಾರೆ ದಿಲ್ಲಿ ಮೂಲದ ಈ ಹಿರಿಯ ಆಟಗಾರ. ಆದರೆ, ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ, ಅಮೋಘ ಅರ್ಧ ಶತಕ ಬಾರಿಸಿ ತಮ್ಮೆಲ್ಲ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದರು. ಅದರಲ್ಲೂ ವಿಕೆಟ್‌ ಪತನಗೊಳ್ಳುತ್ತಿದ್ದ ನಡುವೆಯೂ ಅವರು ಇನಿಂಗ್ಸ್ ಕಟ್ಟಿದ ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಭಾರತ ತಂಡದ ಸ್ಫೋಟಕ ಬ್ಯಾಟರ್‌ಗಳೆನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್‌ ಹಾಗೂ ರಿಷಭ್‌ ಪಂತ್‌ ಪಾಕ್ ವಿರುದ್ಧ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವೈಫಲ್ಯ ಎದುರಿಸಿದ್ದಾರೆ. ಈ ಬಗ್ಗೆ ಗಂಭೀರ್‌ ಅಸಮಾಧಾನಗೊಂಡಿದ್ದು, ವಿರಾಟ್‌ ಕೊಹ್ಲಿಯನ್ನು ನೋಡಿಕೊಂಡು ಬ್ಯಾಟ್‌ ಮಾಡುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಸೀಮಿತ ಓವರ್‌ಗಳ ಪಂದ್ಯದಲ್ಲಿ ಉತ್ತಮ ಬ್ಯಾಟರ್‌ ಎನಿಸಿಕೊಂಡಿದ್ದರೂ, ಪ್ರಮುಖ ಪಂದ್ಯಗಳಲ್ಲಿ ಅವರ ತಮ್ಮ ಸಾಮರ್ಥ್ಯ ಸಾಬೀತು ಮಾಡಿಲ್ಲ. ಅಂತೆಯೇ ರಿಷಭ್‌ ಪಂತ್‌ ಪ್ರತಿ ಬಾರಿಯೂ ನಿರ್ಲಕ್ಷ್ಯದ ಬ್ಯಾಟಿಂಗ್‌ ಮಾಡುತ್ತಾರೆ. ಇದಕ್ಕೆ ಅಸಮಾಧಾನಗೊಂಡಿರುವ ಗಂಭೀರ್‌, ಇನಿಂಗ್ಸ್‌ ಕಟ್ಟುವುದು ಹೇಗೆ ಎಂಬುದನ್ನು ವಿರಾಟ್‌ ಕೊಹ್ಲಿಯನ್ನು ನೋಡಿ ಕಲಿಯಬೇಕು ಎಂದು ಸ್ಟಾರ್‌ ಸ್ಟೋರ್ಟ್ಸ್‌ ಸಂವಾದದಲ್ಲಿ ಹೇಳಿದ್ದಾರೆ.

“ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿದ್ದು, ರನ್ ಗಳಿಸಲು ಆರಂಭಿಸಿದ್ದಾರೆ. ಭಾರತದಲ್ಲಿ ಉತ್ತಮ ಅರಂಭಿಕ ಬ್ಯಾಟರ್‌ಗಳು ಇರುವ ಕಾರಣ ೩ ಮತ್ತು ನಾಲ್ಕನೇ ಕ್ರಮಾಂಕದ ಆಟಗಾರರನ್ನು ಅಗತ್ಯಕ್ಕೆ ತಕ್ಕ ಹಾಗೆ ಬದಲಿಸಬೇಕು. ಅಂದರೆ ದೊಡ್ಡ ಮೊತ್ತದ ರನ್‌ ಗಳಿಸುವ ಉದ್ದೇಶದಿಂದ ಸೂರ್ಯಕುಮಾರ್‌ ಯಾದವ್‌ ಅವರನ್ನು ಆಡಿಸುವುದು ಉತ್ತಮ,” ಎಂದು ಗಂಭೀರ್ ಹೇಳಿದ್ದಾರೆ.

“ವಿರಾಟ್‌ ಕೊಹ್ಲಿ ರನ್‌ ಗಳಿಸುವ ರೀತಿಯನ್ನು ನೋಡಿ ಸೂರ್ಯಕುಮಾರ್ ಮತ್ತು ರಿಷಭ್‌ ಪಂತ್‌ ಕಲಿಯಬೇಕಾಗಿದೆ. ಅವರು ಸಿಂಗಲ್‌ ಹಾಗೂ ಎರಡು ರನ್‌ಗಳನ್ನು ಬಾರಿಸುವ ಮೂಲಕ ಓವರ್‌ಗೆ ಸರಾಸರಿ ೧೦ರಂತೆ ರನ್‌ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಮೂಲಕವೇ ಅವರು ಉತ್ತಮ ಇನಿಂಗ್ಸ್‌ ಕಟ್ಟಬಲ್ಲರು. ಸೂರ್ಯಕುಮಾರ್‌ ಅವರು ವಿರಾಟ್‌ ಕೊಹ್ಲಿಗಿಂತ ದೊಡ್ಡ ಹೊಡೆತವನ್ನು ಬಾರಿಸಬಲ್ಲರು. ಆದರೆ, ಪ್ರತಿ ಬಾರಿಯೂ ಅದು ಪ್ರಯೋಜನಕ್ಕೆ ಬಾರದು. ಒತ್ತಡದ ಸಂದರ್ಭದಲ್ಲಿ ಸಿಂಗಲ್‌ ಹಾಗೂ ಎರಡು ರನ್‌ಗಳನ್ನು ಕದಿಯುವುದು ಅಗತ್ಯ,” ಎಂಬುದಾಗಿ ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ | Virat Kohli | ವಿರಾಟ್‌ ಕೊಹ್ಲಿಗೆ ವಿಶೇಷ ಸಂದೇಶವುಳ್ಳ ಜರ್ಸಿ ಗಿಫ್ಟ್ ಕೊಟ್ಟ ಹಾಂಕಾಂಗ್ ತಂಡದ ಸದಸ್ಯರು

Exit mobile version