ಮೆಲ್ಬೋರ್ನ್: ಅಪ್ಪು ಅಭಿನಯದ ಕಡೇ ಚಿತ್ರ ಗಂಧದಗುಡಿ ಚಿತ್ರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿತ್ತು. ವಿಷಯ ಏನಪ್ಪ ಅಂದ್ರೆ, ಗಂಧದ ಗುಡಿ ಪೋಸ್ಟರ್…ಮೆಲ್ಬೋರ್ನ್ನಲ್ಲಿ ನಡೆದ ಭಾರತ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲೂ ಪೋಸ್ಟರ್ ಕಾಣಿಸಿಕೊಂಡಿತು.
ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ವರ್ಷ ಆಗುತ್ತಾ ಬರುತ್ತಿದೆ. ಕರುನಾಡ ಜನತೆ ಅಪ್ಪು ಗುಂಗಿನಿಂದ ಇನ್ನು ಹೊರಬಂದಿಲ್ಲ. ದೇಶ-ವಿದೇಶಗಳಲ್ಲೂ ಅಭಿಮಾನಿಗಳು ಅಪ್ಪು ಅವರನ್ನು ಸ್ಮರಿಸ್ತಾ ಇದ್ದಾರೆ.
ಎಂಸಿಜಿಯಲ್ಲೂ ಅಪ್ಪು ಸ್ಮರಣೆ
ಮೆಲ್ಬೋರ್ನ್ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಗಂಧದಗುಡಿ ಪೋಸ್ಟರ್ ರಾರಾಜಿಸಿತು. ಪುನೀತ್ ರಾಜ್ಕುಮಾರ್ ಅವರ ಕಡೆಯ ಚಿತ್ರ ಗಂಧದಗುಡಿ ಪೋಸ್ಟರ್ ಅನ್ನು ಬೆಂಗಳೂರಿನ ಕ್ರಿಕೆಟ್ ಅಭಿಮಾನಿ ಸುಗುಮಾರ್ ಪ್ರದರ್ಶಿಸಿದರು. ಇವರಿಗೆ ಸ್ಥಳೀಯ ಕನ್ನಡಿಗರು ಅಪ್ಪು ಫೋಟೋ ಹಿಡಿದು ಸಾಥ್ ನೀಡಿದರು. ದೂರದ ಆಸ್ಟ್ರೇಲಿಯಾದಲ್ಲೂ ಅಪ್ಪು ಪೋಸ್ಟರ್ಗಳು ರಾರಾಜಿಸಿದವು. ರೋಚಕ ಹಣಾಹಣಿಗೆ ಸಾಕ್ಷಿಯಾದ ಈ ಕದನದಲ್ಲಿ ಅಪ್ಪು ಸ್ಮರಣೆ ಕಂಡು ಬಂತು.
ಯಾರು ಈ ಸುಗುಮಾರ್
ಮೂಲತಃ ಬೆಂಗಳೂರಿನವರಾದ ಸುಗುಮಾರ್, ಅಪ್ಪಟ್ಟ ಕ್ರಿಕೆಟ್ ಅಭಿಮಾನಿ. ಟೀಮ್ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ವಿದೇಶದಲ್ಲಿ ನಡೆಯುವ ಪ್ರಮುಖ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪ್ರೋತ್ಸಾಹಿಸಲು ತೆರಳುತ್ತಾರೆ. ಅಲ್ಲದೆ, ಆರ್ಸಿಬಿ ತಂಡವನ್ನು ಹೊರ ರಾಜ್ಯಗಳಿಗೂ ಹೋಗಿ ಪ್ರೋತ್ಸಾಹಿಸುತ್ತಾರೆ.
ಅಪ್ಪು ಗಂಧದ ಗುಡಿ ಚಿತ್ರದ ಪ್ರಿ ರೀಲಿಸ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಅಮೋಘವರ್ಷ ನಿರ್ದೇಶನದ, ಪುನೀತ್‌ರಾಜ್‌ಕುಮಾರ್ ಅವರು ಕಾಣಿಸಿಕೊಂಡಿರುವ ಕೊನೆಯ ಚಿತ್ರ ಇದಾಗಿದೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದರ್ಶನ ಮಾಡುವ ಗಂಧದಗುಡಿ ಚಿತ್ರಮಂದಿರಗಳಲ್ಲಿ ಇದೇ ಅಕ್ಟೋಬರ್ 29ಕ್ಕೆ ತೆರೆ ಕಾಣುತ್ತಿದೆ. ಅದರ ಪ್ರೀ ರಿಲೀಸ್ ಈವೆಂಟ್ ಅನ್ನು ಪುನೀತ ಪರ್ವ ಹೆಸರಿನಲ್ಲಿ ನಡೆಯಿತು.
ಇದೀಗ ಎಲ್ಲೆಡೆ ಪುನೀತ್ ಅವರ ಗಂಧದ ಗುಡಿ ಪೋಸ್ಟರ್ ರಾರಾಜಿಸುತ್ತಿದೆ. ಅಲ್ಲದೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲೂ ಅಪ್ಪು ಪೋಸ್ಟರ್ ಕಾಣಿಸಿಕೊಂಡು ಅಭಿಮಾನಿಗಳ ಖುಷಿಯನ್ನು ಹಿಗ್ಗಿಸಿದೆ.
ಇದನ್ನೂ ಓದಿ | IND VS PAK | ವಿರಾಟ್ ಕೊಹ್ಲಿ ಆಟ ನೋಡಲು ಪಾಕಿಸ್ತಾನದಿಂದ ಮೆಲ್ಬೋರ್ನ್‌ಗೆ ಬಂದ ಪಾಕ್ ಅಭಿಮಾನಿ