Site icon Vistara News

World Cup 2023 : ವಿಶ್ವ ಕಪ್​ಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಈ ನಿಯಮ ಪಾಲಿಸಿ ಎಂದ ಗಂಭೀರ್​

Star Sports

ನವದೆಹಲಿ: ಫಾರ್ಮ್ ಆಧಾರದ ಮೇಲೆ 2023 ರ (World Cup 2023) ವಿಶ್ವಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್​ ಗೌತಮ್ ಗಂಭೀರ್ (Gautham Gambhir) ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಭಾರತ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಸಲಹೆ ಕೊಟ್ಟಿದ್ದಾರೆ. ಏಷ್ಯಾಕಪ್ 2023 ತಂಡ ಪ್ರಕಟಗೊಂಡಿದ್ದು, ಅದರಲ್ಲಿ ಕೇವಲ 15 ಮಂದಿ ಮಾತ್ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಗಾಯಗೊಂಡಿರುವ ಇಬ್ಬರು ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ (KL Rahul) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಏಷ್ಯಾಕಪ್​ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಅವರು ಕೂಡ ವಿಶ್ವ ಕಪ್​ಗೆ ಫಿಚ್​ ಆಡಬೇಕಾಗಿದೆ. ಆದರೆ ಗಂಭೀರ್ ಮಾದರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಟಗಾರರು ಫಾರ್ಮ್​ನಲ್ಲಿದ್ದರೆ ಮಾತ್ರ ಆಯ್ಕೆ ಮಾಡಿ ಎಂದಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ಮತ್ತು ಅಕ್ಟೋಬರ್ 5ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ತವರು ಸರಣಿಯು ಭಾರತ ತಂಡಕ್ಕೆ ವಿಶ್ವ ಕಪ್ ಸಿದ್ಧತೆ ಎನಿಸಿಕೊಳ್ಳಲಿದೆ. ಈ ಕುರಿತು ಮಾತನಾಡಿದ ಗಂಭೀರ್​, “ಒಂದು ವಿಷಯ ಸ್ಪಷ್ಟ. ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತಿರುವಾಗ ಇಂಥ ಸ್ಥಾನಕ್ಕೆ ಯಾವುದೇ ಮುಂಚೂಣಿ ಅಭ್ಯರ್ಥಿ ಇಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಫಾರ್ಮ್​ ಆಧರಿಸಿ ಆಯ್ಕೆ ಮಾಡಬೇಕು ಎಂದು ಸ್ಟಾರ್ ಸ್ಪೋರ್ಟ್ಸ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

‘ಫಾರ್ಮ್ ಆಧಾರದ ಮೇಲೆ ವಿಶ್ವಕಪ್ 2023 ತಂಡವನ್ನು ಆಯ್ಕೆ ಮಾಡಿ’

17 ಸದಸ್ಯರ ಏಷ್ಯಾಕಪ್ ತಂಡದಲ್ಲಿ ಎಡಗೈ ಬ್ಯಾಟ್ಸ್ಮನ್ ತಿಲಕ್ ವರ್ಮಾ ಕೂಡ ಇದ್ದಾರೆ. ಭಾರತೀಯ ಆಯ್ಕೆದಾರರು ಸೂರ್ಯಕುಮಾರ್ ಯಾದವ್ ಮೇಲೆಯೂ ನಂಬಿಕೆ ಇಟ್ಟಿದ್ದಾರೆ. ಆದರೆ ಏಕದಿನ ಪಂದ್ಯಗಳಲ್ಲಿ ಅವರು ಇನ್ನೂ ಗಮನಾರ್ಹವಾಗಿ ಮಿಂಚಿಲ್ಲ . ಕೆಎಲ್ ರಾಹುಲ್ ನಂತರ ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ.

“ರೋಹಿತ್ ಶರ್ಮಾ ಹೇಳಿದಂತೆ, ಯಾರ ಸ್ಥಾನಕ್ಕೂ ಗ್ಯಾರಂಟಿ ಇಲ್ಲ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡಿರುವುದು ಉತ್ತಮವಾಗಿದೆ. ಆದರೆ ಅವರು ತಂಡದ ಮುಂಚೂಣಿ ಸಾಲಿನಲ್ಲಿ ಸ್ಥಾನ ಪಡೆಯಲು ಬಯಸಿದರೆ ಅವರು ಪ್ರದರ್ಶನ ನೀಡಬೇಕಾಗುತ್ತದೆ. ತಿಲಕ್ ವರ್ಮಾ ಶ್ರೇಯಸ್ ಅಯ್ಯರ್ ಅಥವಾ ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್​​ ಅಥವಾ ಸೂರ್ಯಕುಮಾರ್ ಯಾದವ್ ಅವರಿಗಿಂತ ಉತ್ತಮ ಫಾರ್ಮ್​ನಲ್ಲದ್ದರೆ ಅವರಿಗೆ ಅವಕಾಶ ನೀಡಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ : Rohit Sharma: ಸಚಿನ್​ ತೆಂಡೂಲ್ಕರ್​ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್​ ಶರ್ಮ

ಆದಾಗ್ಯೂ, ಏಕದಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ, ಗಂಭೀರ್ ಸೂರ್ಯಕುಮಾರ್ ಯಾದವ್ ಅವರನ್ನು ಬೆಂಬಲಿಸಿದ್ದಾರೆ. 2023 ರ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ನಂ.1 ಟಿ 20 ಬ್ಯಾಟರ್​​ಗೆ ದೀರ್ಘ ಕ್ರಿಕೆಟ್​​ನ ಜವಾಬ್ದಾರಿ ನೀಡಬೇಕು ಎಂದಿದ್ದಾರೆ. ಆದರೆ, ಏಷ್ಯಾ ಕಪ್ 2023 ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಅವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಸ್ಥಿರತೆ ಹೊಂದಿಲ್ಲದಿರಬಹುದು. ಆದರೆ ಅವರು ಪ್ರಭಾವ ಬೀರುತ್ತಾರೆ. ತಂಡದ ಮ್ಯಾನೇಜ್ಮೆಂಟ್ ಅವನನ್ನು ಬಳಸಲು ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ಕಂಡುಹಿಡಿಯಬೇಕು. ಆ ಸರಣಿ ವಿಶ್ವಕಪ್​​ನಲ್ಲಿ ಯಾರು ಆಡುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಏಕೆಂದರೆ ವಿಶ್ವಕಪ್​ಗೂ ಮುನ್ನ ನಿಮ್ಮ ಮುಖ್ಯ ತಂಡ ಒಟ್ಟಿಗೆ ಆಡುವ ಸರಣಿ ಇರಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಎಡಗೈ ಚರ್ಚೆ ನಿಷ್ಪ್ರಯೋಜಕ

ಪ್ಲೇಯಿಂಗ್ ಇಲೆವೆನ್​​ನಲ್ಲಿ ಮೂವರು ಎಡಗೈ ಬ್ಯಾಟರ್​ಗಳು ಹೊಂದುವ ಚರ್ಚೆ ನಿಷ್ಪ್ರಯೋಜಕ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಬದಲಾಗಿ, ಅವರು 2023 ರ ವಿಶ್ವಕಪ್ ಆಯ್ಕೆಗಾಗಿ ಫಾರ್ಮ್ ಓವರ್ ಇಂಪ್ಯಾಕ್ಟ್ ಅನ್ನು ಬೆಂಬಲಿಸಿದ್ದಾರೆ.

ನಾನು ಮೊದಲೇ ಹೇಳಿದಂತೆ, ಫಾರ್ಮ್ ಮುಖ್ಯ. ಎಡಗೈ ಅಥವಾ ಬಲಗೈ ಬ್ಯಾಟ್ಸಮನ್​ ಯಾರು ಅಥವಾ ನಮಗೆ ಮೂವರು ಎಡಗೈ ಬ್ಯಾಟರ್​​ಗಳ ಅಗತ್ಯವಿದೆಯೇ ಎಂಬ ಬಗ್ಗೆ ಈ ಚರ್ಚೆ ನಿಷ್ಪ್ರಯೋಜಕ. ನೀವು ಎಡಗೈ ಬ್ಯಾಟರ್​ ಅನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬುದು ಕಡ್ಡಾಯವಲ್ಲ ಎಂದು ಹೇಳಿದ್ದಾರೆ.

Exit mobile version