ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ(Babar Azam) ಅವರು ನೆದರ್ಲೆಂಡ್ಸ್(Pakistan vs Netherlands) ವಿರುದ್ಧ ಔಟಾಗುತ್ತಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರು ಟ್ರೋಲ್ ಆಗಿದ್ದಾರೆ. ಇದಕ್ಕೆ ಕಾರಣ ವಿಶ್ವಕಪ್ ಟೂರ್ನಿ(icc world cup 2023) ಆರಂಭಕ್ಕೂ ಮುನ್ನ ಗಂಭೀರ್ ನೀಡಿದ ಹೇಳಿಕಯಾಗಿದೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಗಂಭೀರ್ ಅವರು ಪಾಕ್ ನಾಯಕ ಬಾಬರ್ ಅಜಂ ಅವರನ್ನು ಹಾಡಿ ಹೊಗಳಿದ್ದರು. ಅಲ್ಲದೆ ಭಾರತೀಯ ಆಟಗಾರರನ್ನು ಕಡೆಗಣಿಸಿದ್ದರು. ಬಾಬರ್ ಅಜಂ ಈ ಬಾರಿ ವಿಶ್ವಕಪ್ನಲ್ಲಿ ನಾಲ್ಕು ಶತಕ ಮತ್ತು ಟೂರ್ನಿಯ ಗರಿಷ್ಠ ಸ್ಕೋರರ್ ಆಗಲಿದ್ದಾರೆ ಎಂದಿದ್ದರು.
ನೆಟ್ಟಿಗರು ಫುಲ್ ಖುಷ್
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬಾಬರ್ 18 ಎಸೆತ ಎದುರಿಸಿ 5ರನ್ಗೆ ಔಟಾದರು. ಬಾಬರ್ ಅವರ ವಿಕೆಟ್ ಬೀಳುತ್ತಿದ್ದಂತೆ ನೆಟ್ಟಿಗರು ಗಂಭೀರ್ ಅವರ ಕಾಲೆಳೆದಿದ್ದಾರೆ. “ಅಬ್ಬಾ ಎಂತಹ ಬ್ಯಾಟಿಂಗ್, ಸೂಪರ್ ಇನಿಂಗ್ಸ್, ಒಂದು ಶತಕ ದಾಖಲಾಯಿತು ಇನ್ನು ಕೇವಲ ಮೂರು ಮಾತ್ರ ಬಾಕಿ ಇದೆ” ಹೀಗೆ ಹಲವು ಕಮೆಂಟ್ ಮಾಡುವ ಮೂಲಕ ಗಂಭೀರ್ ಅವರನ್ನು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಶೀಘ್ರದಲ್ಲೇ ಗಂಭೀರ್ ಅವರು ಬಾಬರ್ ಕಳಪೆ ಪ್ರದರ್ಶನವನ್ನು ಸಮರ್ಥಿಸಿಕೊಳ್ಳಲಿದ್ದಾರೆ. ಇದು ನಿಶ್ಚಿತ. ಎಂದು ನಗುವಿನ ಎಮೊಜಿಯನ್ನು ಹಾಕಿ ಟ್ರೋಲ್ ಮಾಡಿದ್ದಾರೆ.
ಏಷ್ಯಾಕಪ್ನಲ್ಲಿ ಕಿಡಿ ಕಾರಿದ್ದ ಗಂಭೀರ್
ಏಷ್ಯಾ ಕಪ್ನಲ್ಲಿ ವಿರಾಟ್ ಕೊಹ್ಲಿ ಸೇರಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ ವಿಚಾರವಾಗಿ ಗಂಭೀರ್ ಕಿಡಿ ಕಾರಿದ್ದರು. ಬದ್ಧ ಎದುರಾಳಿ ಪಾಕ್ ಆಟಗಾರರಲ್ಲಿ ಮಾತನಾಡುವುದು ಸರಿಯಲ್ಲ. ಇದೇನಿದ್ದರು ಮೈದಾನದ ಹೊರಗಡೆ ಇರಲಿ ಎಂದು ದೇಶ ಪ್ರೇಮದ ಪಾಠ ಮಾಡಿದ್ದ ಗಂಭೀರ್ ತಾನು ಮಾತ್ರ ಪಾಕ್ ಆಟಗಾರರನ್ನು ಒಲೈಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ನರಿ ಬುದ್ಧಿ ತೋರಬೇಡಿ ಎಂದಿದ್ದರು.
ಇದನ್ನೂ ಓದಿ ICC World Cup 2023 : ಏಕ ದಿನ ಕ್ರಿಕೆಟ್ ಮಾದರಿ ಯುಗಾಂತ್ಯ? ಮೈದಾನಗಳು ಯಾಕೆ ಖಾಲಿ ಖಾಲಿ?
ವರ್ಚಸ್ಸಿಗೆ ಧಕೆ
2007ರ ಟಿ20 ವಿಶ್ವಕಪ್ ಫೈನಲ್ ಮತ್ತು 2011 ಏಕದಿನ ವಿಶ್ವಕಪ್ ಫೈನಲ್ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಭಾರತ ಕಪ್ ಗೆಲ್ಲಲ್ಲ
ವಿಶ್ವಕಪ್ ವಿಚಾರದಲ್ಲಿಯೂ ಗಂಭೀರ್ ಈ ಬಾರಿ ಭಾರತ ಕಪ್ ಗೆಲ್ಲುವುದಿಲ್ಲ ಎಂದಿದ್ದರು. “ಈ ಬಾರಿ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್ ಗೆಲ್ಲಲಿದೆ. ಈ ತಂಡದಲ್ಲಿ ಉತ್ತಮ ಆಲ್ರೌಂಡರ್, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಕಪ್ ಗೆಲ್ಲುವುದು ಕಷ್ಟ ಆದರೆ ಫೈನಲ್ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್ ಕಟ್ಟಬಲ್ಲ ಆಟಗಾರರು ವಿಶ್ವಕಪ್ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್ ಗೆಲ್ಲುವುದು ಅಸಾಧ್ಯ” ಎಂದು ಹೇಳಿದ್ದರು.