Site icon Vistara News

IPL 2024 : ಲಕ್ನೊ ತಂಡದಿಂದ ಗೌತಮ್​ ಗಂಭೀರ್​ಗೆ ಗೇಟ್​ಪಾಸ್​​?

Gautham Gambhir

ಲಖನೌ: ಮುಂಬರುವ ಐಪಿಎಲ್​ ಋತುವಿಗಾಗಿ (IPL 2024) ಎಲ್ಲ ತಂಡಗಳು ಸಜ್ಜಾಗುತ್ತಿವೆ. ಹರಾಜಿನಲ್ಲಿ ಪ್ರತಿಭಾನ್ವಿತ ಆಟಗಾರರನ್ನು ಖರೀದಿ ಮಾಡಲು ಹಾಗೂ ಸಹಾಯಕ ಸಿಬ್ಬಂದಿಯನ್ನು ನೇಮಿಸಲು ಮುಂದಾಗುತ್ತಿವೆ. ಇದೇ ಹಿನ್ನೆಲೆಯಲ್ಲಿ ಲಕ್ನೊ ಸೂಪರ್​ ಜೈಂಟ್ಸ್ ತಂಡ ಈಗ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಅರಂಭದಲ್ಲಿ ಕೋಚ್ ಆ್ಯಂಡಿ ಫ್ಲವರ್ ಅವರನ್ನು ಕೈ ಬಿಟ್ಟು ಜಸ್ಟಿನ್ ಲ್ಯಾಂಗರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಫ್ರಾಂಚೈಸಿ ಇದೀಗ ಮಾರ್ಗದರ್ಶಕ ಗೌತಮ್ ಗಂಭೀರ್ ಅವರಿಗೂ ಗೇಟ್​ಪಾಸ್​ ಕೊಡುತ್ತದೆ ಎಂಬುದಾಗಿ ವರದಿಯಾಗಿದೆ.

ಬಿಸಿಸಿಐನ ಮಾಜಿ ಮುಖ್ಯ ಆಯ್ಕೆದಾರ ಎಂಎಸ್​ಕೆ ಪ್ರಸಾದ್ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್​ಜಿ ) ಸಹಾಯಕ ಸಿಬ್ಬಂದಿ ತಂಡಕ್ಕೆ ಕಾರ್ಯತಂತ್ರದ ಸಲಹೆಗಾರರಾಗಿ ಸೇರಿಕೊಂಡಿದ್ದಾರೆ. ಪ್ರಸಾದ್ ಅವರ ನೇಮಕವು ತಂಡದ ವ್ಯಾಪಕ ಪುನರ್ರಚನೆಯ ಒಂದು ಸೂಚನೆಯಾಗಿದೆ. ಆ್ಯಂಡಿ ಫ್ಲವರ್ ಅವರ ನಂತರ ಜಸ್ಟಿನ್ ಲ್ಯಾಂಗರ್ ಅವ ರನ್ನೂ ಕೋಚ್ ಆಗಿ ನೇಮಕ ಮಾಡಿರುವ ಕಾರಣ ಬದಲಾವಣೆ ಬಗ್ಗೆ ಕೌತುಕ ಸೃಷ್ಟಿಯಾಗಿದೆ.

ಹಿಂದಿ ದಿನಪತ್ರಿಕೆ ದೈನಿಕ್ ಜಾಗರಣ್ ಪ್ರಕಾರ, ಗೌತಮ್ ಗಂಭೀರ್ ಎಲ್ಎಸ್​​ಜಿಯಿಂದ ನಿರ್ಗಮಿಸಲಿದ್ದಾರೆ. ಆಂಡಿ ಫ್ಲವರ್ ನಂತರ, ಗೌತಮ್ ಗಂಭೀರ್ ಈಗ ಐಪಿಎಲ್ ಫ್ರಾಂಚೈಸಿಯನ್ನು ತೊರೆಯಲಿದ್ದಾರೆ ಎಂದು ಬರೆದುಕೊಂಡಿದೆ.

ಕೆಕೆಆರ್​ ತಂಡದ ಪಾಲು

ಎಲ್​ಎಸ್​ಜಿಯಿಂದ ಬಿಡುಗಡೆಯಾಗಿರುವ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಭಾರತದ ಶ್ರೇಷ್ಠ ಆಟಗಾರ ಕೆಲವು ಸಮಯದಿಂದ ಕೆಕೆಆರ್ ಮ್ಯಾನೇಜ್ಮೆಂಟ್​ ಜತೆ ಸಂಪರ್ಕದಲ್ಲಿದ್ದಾರೆ ಎಂಬುದಾಗಿಯೂ ಹೇಳಲಾಗಿದೆ.

ಇದನ್ನೂ ಓದಿ : IPL 2024 : ಲಕ್ನೊ ಫ್ರಾಂಚೈಸಿಗೆ ಭಾರತ ತಂಡದ ಮಾಜಿ ಆಯ್ಕೆಗಾರ ಸೇರ್ಪಡೆ

ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಆಟಗಾರನಾಗಿದ್ದ ಗಂಭೀರ್​ 2011 ರ ಹರಾಜಿನಲ್ಲಿ ದಾಖಲೆಯ 2.4 ಮಿಲಿಯನ್ ಯುಎಸ್ ಡಾಲರ್ ಗೆ ನೈಟ್ ರೈಡರ್ಸ್ ತಂಡ ಸೇರಿದ್ದರು. ಆ ತಂಡಕ್ಕೆ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ನಾಲ್ಕು ಋತುಗಳಲ್ಲಿ, ಅವರು ತಂಡವನ್ನು ಮುನ್ನಡೆಸಿದ್ದರು. ವಿಶೇಷವಾಗಿ 2012 ರಲ್ಲಿ ಅವರು ತಮ್ಮ ಮೊದಲ ಚಾಂಪಿಯನ್​ ಪಟ್ಟ ಗೆದ್ದು 2014 ರಲ್ಲಿ ಕೆಕೆಆರ್ ಅನ್ನು ಎರಡನೇ ಐಪಿಎಲ್ ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಇದರಿಂದಾಗಿ ಕೆಕೆಆರ್ ಮತ್ತು ಲೀಗ್​ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿಕೊಂಡಿದ್ದಾರೆ ಗಂಭೀರ್​.

ಗಂಭೀರ್ ಪ್ರಸ್ತುತ ಯುಎಸ್ಎನಲ್ಲಿ ಕ್ರಿಕೆಟ್​​ನ ಕಿರು ಸ್ವರೂಪವಾದ ಯುಎಸ್ ಮಾಸ್ಟರ್ಸ್ ಟಿ 10 ಲೀಗ್​ನಲ್ಲಿದ್ದಾರೆ. ಅವರು 2011 ರ ವಿಶ್ವಕಪ್ ವಿಜೇತ ತಂಡದ ಮತ್ತೊಬ್ಬ ಸದಸ್ಯ ಯೂಸುಫ್ ಪಠಾಣ್ ಅವರೊಂದಿಗೆ ನ್ಯೂಜೆರ್ಸಿ ಟ್ರೈಟಾನ್ಸ್ ಪರ ಆಡಲಿದ್ದಾರೆ.

Exit mobile version