ನವದೆಹಲಿ: ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರಾಹುಲ್ ಶರ್ಮ(Rahul Sharma) ಅವರ ಅತ್ತೆಯ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ಗೌತಮ್ ಗಂಭೀರ್ ಅವರು ಔದಾರ್ಯ ಮೆರೆದಿದ್ದಾರೆ. ಅತ್ತೆಯ ಚಿಕಿತ್ಸೆಗೆ ಸಹಕರಿಸಿದ ವಿಚಾರವನ್ನು ರಾಹುಲ್ ಶರ್ಮ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಶರ್ಮ ಅವರ ಅತ್ತೆ ಮೆದುಳಿನ ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ವಾರ ಅವರ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಈ ವೇಳೆ ಗೌತಮ್ ಗಂಭೀರ್ ಅವರು ಕ್ಲಿಪ್ತ ಸಮಯದಲ್ಲಿ ನರೆವಿಗೆ ಧಾವಿಸಿ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಗಂಭೀರ್(Gautam Gambhir) ಅವರ ಈ ನೆರವಿನಿಂದ ರಾಹುಲ್ ಶರ್ಮ ಅತ್ತೆಗೆ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಸದ್ಯ ಅವರು ಚೇತರಿಕೆ ಕಾಣುತ್ತಿದ್ದಾರೆ.
ಕಷ್ಟದ ಸಮಯದಲ್ಲಿ ನೆರವಿಗೆ ಬಂದ ಗಂಭೀರ್ ಅವರಿಗೆ ರಾಹುಲ್ ಶರ್ಮ ಧನ್ಯವಾದ ತಿಳಿಸಿದ್ದಾರೆ. “ನನ್ನ ಅತ್ತೆ ಮೆದುಳಿನ ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಸಮಯದಲ್ಲಿ ಗಂಭೀರ್ ಅವರು ನನಗೆ ದೇವರಂತೆ ಸಹಾಯಕ್ಕೆ ಬಂದು ನನ್ನ ಅತ್ತೆಯ ಜೀವವನ್ನು ಉಳಿಸುವಂತೆ ಮಾಡಿದರು. ಅವರ ಈ ನೆರವಿಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ” ಎಂದು ಅತ್ತೆಯ ಶಸ್ತ್ರಚಿಕಿತ್ಸೆಯ ಫೋಟೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ IPL 2023: ಗಂಭೀರ್ಗೆ ವಿಶೇಷ ಸಂದೇಶ ರವಾನಿಸಿದ ಕೊಹ್ಲಿ; ವಿಡಿಯೊ ವೈರಲ್
ಗಂಭೀರ್ ಅವರು ಎಷ್ಟೇ ಮುಂಗೋಪಿಯಾಗಿದ್ದರೂ, ಕಷ್ಟದ ಕಾಲದಲ್ಲಿ ಸದಾ ಮುಂದಿರುತ್ತಾರೆ. ಬಿಜೆಪಿ ಸಂಸದನೂ ಆಗಿರುವ ಗಂಭೀರ್ ಪೂರ್ವ ದೆಹಲಿಯ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕೇವಲ ಒಂದು ರೂ.ಗೆ ಊಟ ಸಿಗುವ 2 ಕ್ಯಾಂಟೀನ್ ನಡೆಸುತ್ತಿದ್ದಾರೆ. ಈ ಮೂಲಕ ಬಡವರ ಪಾಲಿಗೆ ಅನ್ನದಾಸೋಹಿಯಾಗಿದ್ದಾರೆ. ವಿಶೇಷ ಎಂದರೆ ಗಂಭೀರ್ ಈ ಕ್ಯಾಂಟೀನ್‍ಗೆ ಸಂಸದೀಯ ಅನುದಾನವನ್ನು ಬಳಸದೇ ತಮ್ಮದೇ ಸ್ವಂತ ಹಣವನ್ನು ವ್ಯಯಿಸಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇಲ್ಲಿನ ಆಹಾರವು ಪೌಷ್ಠಿಕತೆಯಿಂದ ಕೂಡಿದ್ದು, ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.