Site icon Vistara News

Gautam Gambhir: ವಿಶ್ವಕಪ್ ನಂತರವೇ ಮದುವೆ ಎಂದು ಪ್ರಿಯತಮೆಗೆ ಷರತ್ತು ಹಾಕಿದ್ದ ಗಂಭೀರ್! ಇಲ್ಲಿದೆ ಅವರ ಲವ್‌ ಸ್ಟೋರಿ!

Gautam Gambhir

ಭಾರತ ಕ್ರಿಕೆಟ್ ತಂಡದ (India cricket team) ಮುಖ್ಯ ತರಬೇತುದಾರರಾಗಿ (Head coach), ರಾಹುಲ್ ದ್ರಾವಿಡ್ (Rahul Dravid) ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ತಮ್ಮ ಕ್ರಿಕೆಟ್ ಸಾಧನೆಗಳಿಂದಲೇ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಸಾಧಕ ವ್ಯಕ್ತಿಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಹಾಗೆ ಗಂಭೀರ್ ಸಾಧನೆಯ ಹಿಂದೆಯೂ ಅವರ ಪತ್ನಿ ನತಾಶಾ ಜೈನ್ (Natasha Jain) ಅವರ ಪ್ರೀತಿ, ತ್ಯಾಗ ಮತ್ತು ಪರಿಶ್ರಮವಿದೆ.

ಗೌತಮ್ ಗಂಭೀರ್ ಅವರು ಪತ್ನಿ ನತಾಶಾ ಜೈನ್ ಅವರೊಂದಿಗಿನ ತಮ್ಮ ಆಳವಾದ ಪ್ರೀತಿಯ ಪ್ರಯಾಣದ ಕುರಿತು ಅನುಭವ ಹಂಚಿಕೊಂಡಿದ್ದಾರೆ. 2007ರಲ್ಲಿ ಸ್ನೇಹಿತರ ಸಭೆಯಲ್ಲಿ ಭೇಟಿಯಾಗಿದ್ದ ಗೌತಮ್ ಗಂಭೀರ್ ಮತ್ತು ನತಾಶಾ ಜೈನ್ ಅವರ ನಡುವೆ ಪ್ರೀತಿ ಚಿಗುರೊಡೆದಿತ್ತು. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ಖಾಸಗಿಯಾಗಿಡಲು ನಿರ್ಧರಿಸಿದರು. ಗಂಭೀರ್ ಕ್ರಿಕೆಟ್ ವೃತ್ತಿಜೀವನದತ್ತ ಹೆಚ್ಚು ಗಮನ ಹರಿಸಿದರು. ನತಾಶಾ ಅವರು ತಮ್ಮ ಸ್ವಂತ ಅನ್ವೇಷಣೆಗಳಿಗೆ ಸಮಯ ಮೀಸಲಿಟ್ಟು ಸಾರ್ವಜನಿಕ ಕಣ್ಣುಗಳಿಂದ ದೂರವೇ ಉಳಿದರು.

2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನತಾಶಾ ಮತ್ತು ಗಂಭೀರ್ ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವೆ ವಿವಾಹ ಮಾಡಿಕೊಂಡರು. ಈ ಕುರಿತು ಹೇಳಿಕೊಂಡ ನತಾಶಾ, ನಾವು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡಿದ್ದೇವು. 2- 3 ವರ್ಷಗಳ ಕಾಲ ಸ್ನೇಹಿತರಾಗಿ ಮುಂದುವರಿದೆವು. ಅನಂತರ ಮದುವೆಯಾಗಲು ನಿರ್ಧರಿಸಿದೆವು. ನಮ್ಮಿಬ್ಬರ ಕುಟುಂಬಗಳು ಕಳೆದ 30 ವರ್ಷಗಳಿಂದ ಪರಸ್ಪರ ಪರಿಚಿತವಾಗಿದ್ದವು. ನಮ್ಮಿಬ್ಬರ ತಂದೆಯವರು ಒಬ್ಬರಿಗೊಬ್ಬರು ತಿಳಿದಿದ್ದರು. ಅವರಿಂದಾಗಿ ನಂತರ ನಾವು ಸ್ನೇಹಿತರಾದೆವು ಎಂದು ಹೇಳಿದ್ದರು.


ಸ್ನೇಹದಿಂದ ಪ್ರೀತಿಯವರೆಗೆ

ಗೌತಮ್ ಗಂಭೀರ್‌ ಅವರ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ನತಾಶಾ ಅವರು ಬೆಂಬಲವಾಗಿ ನಿಂತಿದ್ದಾರೆ. ಅವರ ಹಲವಾರು ಪಂದ್ಯಗಳಿಗೆ ಹಾಜರಾಗಿದ್ದಾರೆ. ಸವಾಲಿನ ಸಮಯದಲ್ಲಿ ಭಾವನಾತ್ಮಕ ಶಕ್ತಿಯನ್ನು ಒದಗಿಸಿದ್ದಾರೆ. ಇದು ಅವರಿಬ್ಬರ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ.

ಕ್ರಿಕೆಟ್‌ಗೆ ಒದಗಿರುವ ಗೌತಮ್ ಅವರ ಸಮರ್ಪಣೆ ಮನೋಭಾವ ಅವರ ವಿವಾಹದ ಯೋಜನೆಗಳಲ್ಲಿಯೂ ಸ್ಪಷ್ಟವಾಗಿತ್ತು. 2011ರ ವಿಶ್ವಕಪ್ ಅನಂತರವೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಈ ಮೂಲಕ ನತಾಶಾ ಅವರೊಂದಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸುವ ಮೊದಲು ಕ್ರಿಕೆಟ್ ಮೇಲಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು.


ತಂದೆಯಾಗಿ ಗಂಭೀರ್

ನತಾಶಾ ಮತ್ತು ಗಂಭೀರ್ ದಂಪತಿಗೆ 2014ರಲ್ಲಿ ಮಗಳು ಆಝಿನ್ ಮತ್ತು 2017ರಲ್ಲಿ ಎರಡನೇ ಮಗಳು ಅನೈಜಾ ಜನಿಸಿದ್ದಾರೆ. ಕ್ರಿಕೆಟ್ ಕ್ಷೇತ್ರದ ಆಚೆಗೆ ಗೌತಮ್ ಗಂಭೀರ್ ಗಂಡನಾಗಿ, ತಂದೆಯಾಗಿ ಹೆಚ್ಚು ಸಂತೋಷಪಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಅವರು ಆಗಾಗ ತಮ್ಮ ಕುಟುಂಬದ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಸಂಗತಿಗಳು. ನತಾಶಾ ಮತ್ತು ತಮ್ಮ ಹೆಣ್ಣುಮಕ್ಕಳೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯಲು ಅವರು ಸಮಯವನ್ನು ಹೆಚ್ಚಾಗಿ ಮೀಸಲಿಡುತ್ತಾರೆ. ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದರೂ ಗೌತಮ್ ತಮ್ಮ ಕುಟುಂಬ ಜೀವನವನ್ನು ಖಾಸಗಿಯಾಗಿರಿಸಿಕೊಂಡಿದ್ದಾರೆ.

ನತಾಶಾ ಮತ್ತು ಗಂಭೀರ್ ಅವರ ತಂದೆಯಂದಿರು ದೀರ್ಘಕಾಲದ ಸ್ನೇಹಿತರಾಗಿದ್ದರಿಂದ ಗೌತಮ್ ಮತ್ತು ನತಾಶಾ ಅವರಿಗೆ ಡೇಟಿಂಗ್ ಮಾಡುವ ಅವಕಾಶವೂ ದೊರೆಯಿತು. ಇದು ಮದುವೆಗೂ ಮೊದಲು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಭೇಟಿಯಾದ ಅನಂತರ ಸ್ನೇಹಿತರಾದ ಅವರು ಅಂತಿಮವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬಳಿಕ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡರು. ಸುಮಾರು ಒಂದು ವರ್ಷದ ಅನಂತರ ವಿವಾಹವಾದರು.


ಪರಸ್ಪರ ಗೌರವ

ಕ್ರಿಕೆಟ್ ಖ್ಯಾತಿಯ ಹೊರತಾಗಿ ನತಾಶಾ ಅವರು ತಮ್ಮ ವೈಯಕ್ತಿಕ ಗುಣಗಳನ್ನು ಇಷ್ಟಪಟ್ಟಿದ್ದು ಗೌತಮ್ ಗಂಭೀರ್ ಅವರನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿತಂತೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಮನೆಯಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಚರ್ಚಿಸದಿರುವ ಕಟ್ಟುನಿಟ್ಟಾದ ನೀತಿಯನ್ನು ಅವರು ಹೊಂದಿದ್ದಾರಂತೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗೌತಮ್‌ ಗಂಭೀರ್‌ ದಿಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದರು. ಗೌತಮ್‌ ಗಂಭೀರ್‌ ಅವರ ರಾಜಕೀಯ ಜೀವನಕ್ಕೂ ನತಾಶಾ ಬೆಂಗಾವಲಾಗಿ ನಿಂತಿದ್ದರು.

ಇದನ್ನೂ ಓದಿ: Gautam Gambhir : ಟೀಮ್ ಇಂಡಿಯಾಗೆ ಈಗ ಆಕ್ರಮಣಕಾರಿ ‘ಗಂಭೀರ’ ಕೋಚ್!

ಸವಾಲುಗಳ ನಡುವೆ ಅರಳಿದ ಪ್ರೀತಿ

ಮದುವೆಯಾಗುವ ಮೊದಲು ಗೌತಮ್ ಅವರು 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅನಂತರ ಮಾತ್ರ ಮದುವೆಯಾಗುವುದಾಗಿ ಷರತ್ತು ಹಾಕಿದ್ದರು. ಇದನ್ನು ನತಾಶಾ ಖುಷಿಯಿಂದ ಒಪ್ಪಿಕೊಂಡರು. ಗೌತಮ್ ಗಂಭೀರ್ ಮತ್ತು ನತಾಶಾ ಜೈನ್ ಅವರ ಪ್ರೀತಿ ಪ್ರಯಾಣವು ಕುತೂಹಲಕರ ಮತ್ತು ಸ್ಫೂರ್ತಿದಾಯಕವಾಗಿದೆ.

Exit mobile version