ಮುಂಬಯಿ: ಟೀಮ್ ಇಂಡಿಯಾದ(Team India) ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಭಾರತ ತಂಡದ ಕೋಚ್(team india coach) ಆಗಲಿದ್ದಾರೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದ್ದು, ಇದಾದ ಬಳಿಕ ಗಂಭೀರ್ ಅಧಿಕಾರ ಸ್ವೀಕರಿಸುವುದು ಖಚಿತ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ವೇಳೆಯೇ ಗಂಭೀರ್ ಕೋಚ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಾದ ಬಳಿಕ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟ ಕೂಡ ಅಲಂಕರಿಸಿತು. ಇದಾದ ಬಳಿಕವಂತೂ ಕೋಚ್ ಆಗುವ ಮಾತಿಗೆ ಇನ್ನಷ್ಟು ಪುಷ್ಟಿಸಿಕ್ಕಿತು. ಅಲ್ಲದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಗಂಭೀರ್ ಜತೆ ಬಹಳ ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಇದೀಗ ಇಂಡಿಯಾ ಟುಡೆ ಗಂಭೀರ್ ಕೋಚ್ ಆಗುವು ನಿಶ್ಚಿತ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಗಂಭೀರ್ ಐಪಿಎಲ್ನಲ್ಲಿ ಮೂರು ಸೀಸನ್ಗಳಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ Gautam Gambhir : ಗೌತಮ್ ಗಂಭೀರ್ ಭಾರತ ತಂಡದ ಮುಂದಿನ ಕೋಚ್; ಐಪಿಎಲ್ ಫ್ರಾಂಚೈಸಿ ಮಾಲೀಕರಿಂದ ಬಹಿರಂಗ?
ಗಂಭೀರ್ ಅವರು ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ, ತಮ್ಮ ತಂಡದ ನಾಯಕ ಮೇ 26ರಂದು ನಡೆಯುವ ಫೈನಲ್ ಪಂದ್ಯವ ವೇಳೆ ಟಾಸ್ಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು. ಅದರಂತೆ ಕೆಕೆಆರ್ ಫೈನಲ್ ಪ್ರವೇಶಿಸಿ ಕಪ್ ಕೂಡ ಗೆದ್ದಿತು. ಗಂಭೀರ್ ತಂಡವನ್ನು ಸಿದ್ಧಪಡಿಸಿದ ರೀತಿ ಮತ್ತು ಕಪ್ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆಲ್ಲ ಫಲ ನೀಡಿತು. ಅವರ ಈ ಸಾಧನೆ ಮತ್ತು ಹಠವನ್ನು ಸೂಕ್ಷವಾಗಿ ಗಮನಿಸಿದ ಬಿಸಿಸಿಐ ಭಾರತ ತಂಡ ಕೋಚ್ ಹುದ್ದೆ ನೀಡುವ ಯೋಜನೆಯಲ್ಲಿದೆ. ಇನ್ನೊಂದು ಮೂಲಗಳ ಪ್ರಕಾರ ಗಂಭೀರ್ ಕೋಚ್ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಗಂಗೂಲಿ ಕೂಡ ಸಾಥ್
ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಕೂಡ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಕೋಚ್ ಆದರೆ ಉತ್ತಮ ಎಂದಿದ್ದಾರೆ. ‘ಗಂಭೀರ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ನನ್ನ ಬೆಂಬಲವಿದೆ. ಅವರು ಈ ಹುದ್ದಗೆ ಸೂಕ್ತ ಅಭ್ಯರ್ಥಿ’ ಎಂದು ಹೇಳುವ ಮೂಲಕ ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ.