ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರು ಭಾರತ ತಂಡ ಮುಂದಿನ ಕೋಚ್ ಆಗಲಿದ್ದಾರೆ(gautam gambhir team india coach) ಎಂದು ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಗಂಭೀರ್ ಅವರು ಕೇಂದ್ರ ಗೃಹ ಮಂತ್ರಿ ಅಮೀತ್ ಶಾ(Amit Shah) ಅವರನ್ನು ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯ ಫೋಟೊ ಕಂಡು ನೆಟ್ಟಿಗರು ಗಂಭೀರ್ ಕೋಚ್ ಆಗುವುದು ಖಚಿತ ಎಂದಿದ್ದಾರೆ.
ಗಂಭೀರ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭಿನಂಧನೆ ಸಲ್ಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಕೋಚ್ ಆಗುವ ಉದ್ದೇಶದಿಂದಲೇ ಗಂಭೀರ್ ಈ ನಿರ್ಧಾರ ಕೈಗೊಂಡದ್ದು ಎಂಬ ಮಾತುಗಳು ಕೂಡ ಕೇಳಿ ಬಂದಿದೆ.
2 ದಿನಗಳ ಹಿಂದಷ್ಟೇ ಬಿಸಿಸಿಐ ಕೂಡ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳಲು ಅಂತಿಮ ನಿರ್ಧಾರ ಕೈಗೊಂಡಿದ್ದು, ಇದೇ ತಿಂಗಳಾತ್ಯಂದಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ಅಮಿತ್ ಶಾ ಅವರನ್ನು ಗಂಭೀರ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಮಿತ್ ಶಾ ಅವರ ಮಗನಾಗಿದ್ದಾರೆ.
ಇದನ್ನೂ ಓದಿ Gautam Gambhir: ಗೌತಮ್ ಗಂಭೀರ್ ಭಾರತದ ಮುಂದಿನ ಕೋಚ್; ಅಧಿಕೃತ ಘೋಷಣೆಯೊಂದೇ ಬಾಕಿ
‘ಲೋಕಸಭಾ ಚುನಾವಣಾ ಯಶಸ್ಸಿಗೆ ಅಭಿನಂದಿಸುವ ಸಲುವಾಗಿ ನಾನು ಸನ್ಮಾನ್ಯ ಅಮಿತ್ ಶಾ ಅವರನ್ನು ಭೇಟಿಮಾಡಿ ಅವರನ್ನು ಅಭಿನಂದಿಸಿದೆ. ಗೃಹ ಸಚಿವರಾಗಿ ಅವರ ನಾಯಕತ್ವವು ನಮ್ಮ ರಾಷ್ಟ್ರದ ಭದ್ರತೆ ಮತ್ತು ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆರಂಭದಲ್ಲಿ ಎನ್ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಕೊಚ್ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಈ ವೇಳೆ ಗಂಭೀರ್ ಕೋಚ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಅವರೇ ಕೋಚ್ ಆಗುವುದು ಖಚಿತ ಎನ್ನುತ್ತಿದೆ ಮೂಲಗಳು. ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಬಳಿಕವೇ ಕೋಚ್ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.