ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ವಿಚಾರದಲ್ಲಿ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದಂತಿದೆ. ಗೌತಮ್ ಗಂಭೀರ್(Gautam Gambhir) ಅವರು ಮುಂದಿನ ಕೋಚ್(India Coach) ಎನ್ನುತ್ತಿದ್ದಾಗಲೇ ಇದೀಗ ವಿವಿಎಸ್ ಲಕ್ಷ್ಮಣ್(VVS Laxman) ಹೆಸರು ಕೂಡ ಕೇಳಿ ಬಂದಿದೆ. ಕೋಚ್ ಆಗುವ ಕುರಿತು ಗಂಭೀರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಸಂಸ್ಥೆ ‘ಎಎನ್‌ಐ’ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘ಈ ಸಂದರ್ಭದಲ್ಲಿ ಉತ್ತರಿಸುವುದು ಕಷ್ಟ’ ಎಂದು ಹೇಳಿದ್ದಾರೆ. ‘ನಾನು ಭವಿಷ್ಯದ ಬಗ್ಗೆ ತುಂಬಾ ಯೋಚಿಸುತ್ತಿಲ್ಲ. ನೀವು ನನಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಾ. ಈಗಷ್ಟೇ ಐಪಿಎಲ್‌ನಲ್ಲಿ ಕೆಕೆಆರ್ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಕ್ಷಣವನ್ನು ಆನಂದಿಸೋಣ” ಎಂದು ಹೇಳಿದ್ದಾರೆ. ಗಂಭೀರ್ ಅವರ ಈ ಮಾತುಗಳನ್ನು ಗಮನಿಸುವಾಗ ಅವರು ಪ್ರಧಾನ ಕೋಚ್ ಆಗುವುದು ಅನುಮಾನ ಎನ್ನುವಂತಿದೆ. ಲಕ್ಷ್ಮಣ್ ಅವರು ಪ್ರಧಾನ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯೂ ಕಂಡುಬಂದಿದೆ.
ಬಿಸಿಸಿಐ ಕೂಡ ರಾಹುಲ್ ದ್ರಾವಿಡ್ ಬಳಿಕ ಲಕ್ಷ್ಮಣ್ ಅವರನ್ನೇ ಕೋಚ್ ಮಾಡಲು ಮುಂದಾಗಿತ್ತು. ಆದರೆ ಅವರು ಆರಂಭದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಆ ಬಳಿಕ ಗಂಭೀರ್ ಹೆಸರು ಬಲವಾಗಿ ಕೇಳಿಬಂದಿತ್ತು. ಇದೀಗ ಇದ್ದಕ್ಕಿದಂತೆ ಮತ್ತೆ ಲಕ್ಷ್ಮಣ್ ಹೆಸರು ಕೇಳಿ ಬರಲಾರಂಭಿಸಿದೆ. ಒಂದೊಮ್ಮೆ ಲಕ್ಷ್ಮಣ್ ಕೋಚ್ ಆಗಲು ಸಿದ್ಧ ಎಂದಾದರೆ ಬಿಸಿಸಿಐ ಈ ಹುದ್ದೆಯನ್ನು ಅವರಿಗೆ ನೀಡುವುದರಲ್ಲಿ ಯಾವುದೇ ಅನುಮಾನ ಬೇಡ. ಆಗ ಗಂಭೀರ್ಗೆ ಬ್ಯಾಟಿಂಗ್ ಕೋಚ್ ಹುದ್ದೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ Gautam Gambhir : ಕೋಚ್ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್!
ಪ್ರಸ್ತುತ ಎನ್ಸಿಎ ಅಧ್ಯಕ್ಷರಾಗಿರುವ ಲಕ್ಷ್ಮಣ್ ಈ ಹಿಂದೆ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ಕೋಚ್ ಹಲವು ಸರಣಿಯಲ್ಲಿ ತಂಡದ ಮಾರ್ಗದರ್ಶಕರಾಗಿ ಯಶಸ್ಸು ಕಂಡಿದ್ದಾರೆ. ಏಷ್ಯಾನ್ ಗೇಮ್ಸ್ನಲ್ಲಿ ಭಾರತ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದು ಕೂಡ ಲಕ್ಷ್ಮಣ್ ಕೋಚಿಂಗ್ನಲ್ಲಿಯೇ. ಇದು ಮಾತ್ರವಲ್ಲದೆ ಲಕ್ಷ್ಮಣ್ ಕೋಚಿಂಗ್ ಮಾಡಿದ ಎಲ್ಲ ಸರಣಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಜತೆಗೆ ಶಾಂತಾ ಸ್ವಾಭಾವದಿಂದ ವರ್ತಿಸುವ ಅವರು ಆಟಗಾರರೊಂದಿಗೆ ಬೇಗನೆ ಬೆರೆದುಕೊಳ್ಳುತ್ತಾರೆ. ಗಂಭೀರ್ ಕೊಂಚ ಸಿಡುಕು ಸ್ವಭಾವದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳ ಮಧ್ಯೆ ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆಯೂ ಹೆಚ್ಚಿದೆ.
ರಾಹುಲ್ ದ್ರಾವಿಡ್(Rahul Dravid) ಅವರು ಟಿ20 ವಿಶ್ವಕಪ್ ಬಳಿಕ ಕೋಚ್(India Head Coach) ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಕೋಚ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ.