ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್(Gautam Gambhir) ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(AB de Villiers) ಬಗ್ಗೆ ಗಂಭೀರ್ ನೀಡಿದ ಹೇಳಿಕೆಯೊಂದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
“ಎಬಿಡಿ ವಿಲಿಯರ್ಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ ವೈಯಕ್ತಿಕ ದಾಖಲೆಗಳನ್ನು ಮಾತ್ರ ಹೊಂದಿದ್ದಾರೆ. ತಂಡಕೋಸ್ಕರ ಅವರ ಕೊಡುಗೆ ಶೂನ್ಯ” ಎಂದು ಗಂಭೀರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಜತೆಗೆ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯಾರು ಬೇಕಾದರೂ ರನ್ ಗಳಿಸಬಹುದು. ಇಲ್ಲಿ ಎಬಿಡಿ ಮಾತ್ರವಲ್ಲ ಯಾರೂ ಬೇಕಾದರೂ ಮೈದಾನದ ಮೂಲೆ ಮೂಲೆಗೂ ಚೆಂಡು ಹೊಡೆಯಬಹುದು, ಏಕೆಂದರೆ ಇದು ಚಿಕ್ಕ ಕ್ರೀಡಾಂಗಣ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಈ ರೀತಿ ಹೇಳಿಕೆ ನೀಡಿದ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ. ಕೆಲ ನೆಟ್ಟಿಗರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗೌತಮ್ ಗಂಭೀರ್ ಅವರ ಐಪಿಎಲ್ ದಾಖಲೆಗಳನ್ನು ನೀವು ಏಕೆ ಈ ಮೈದಾನದಲ್ಲಿ ಉತ್ತಮ ರನ್ ಮತ್ತು ದಾಖಲೆ ಹೊಂದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ತಾವೂ ಒಬ್ಬ ಶ್ರೇಷ್ಠ ಕ್ರಿಕೆಟಿಗರಾಗಿ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗನನ್ನು ಈ ರೀತಿ ಅವಮಾನ ಮಾಡುವುದು ಎಷ್ಟು ಸರಿ ಎಂದು ಹೇಳಿದ್ದಾರೆ.