Site icon Vistara News

Gautam Gambhir: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಉಲ್ಟಾ ಹೊಡೆದ ಗಂಭೀರ್​

gautam gambhir

ತಿರುಪತಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್​ ಗಂಭಿರ್(Gautam Gambhir)​ ಅವರು ತಿರುಮಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಆದರೆ ಈ ವೇಳೆ ಗಂಭೀರ್​ ಅವರು ವಿಶ್ವಕಪ್(icc world cup 2023)​ ವಿಚಾರದಲ್ಲಿ ಭಾರತದ ಭವಿಷ್ಯ ನುಡಿದಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಕಪ್ ಗೆಲ್ಲುವ ಉತ್ತಮ ಅವಕಾಶವಿದೆ. ಶತಕೋಟಿ ಭಾರತೀಯರ ಪ್ರಾರ್ಥನೆಯೊಂದಿಗೆ ಭಾರತ ವಿಶ್ವಕಪ್‌ ಗೆಲ್ಲುವಂತಾಗಲಿ ಎಂದರು. ಇದೇ ವೇಳೆ ಸಲಹೆಯೊಂದನ್ನು ನೀಡಿ, ಕೇವಲ ವೈಯಕ್ತಿಕ ನಿರ್ವಹಣೆಯಿಂದ ಯಶಸ್ಸು ಸಾಧ್ಯವಿಲ್ಲ ಬದಲಾಗಿ ತಂಡವಾಗಿ ಆಡಬೇಕು ಎಂದು ಕಿವಿಮಾತು ಹೇಳಿದರು.

ಉಲ್ಟಾ ಹೊಡೆದ ಗಂಭೀರ್​

ವಿಶ್ವಕಪ್​ ವಿಚಾರದಲ್ಲಿ ಕಳೆದ ತಿಂಗಳು ಗಂಭೀರ್​ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಭಾರತ ಈ ಬಾರಿ ಕಪ್​ ಗೆಲ್ಲುವುದು ಅಸಾಧ್ಯ ಎಂದು ಹೇಳಿದ್ದರು. “ಈ ಬಾರಿ​ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್​ ಗೆಲ್ಲಲಿದೆ. ಈ ತಂಡದಲ್ಲಿ ಉತ್ತಮ ಆಲ್​ರೌಂಡರ್​, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಕೂಡ ಕಪ್​ ಗೆಲ್ಲುವುದು ಕಷ್ಟ ಆದರೆ ಫೈನಲ್​ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್​ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್​ ಕಟ್ಟಬಲ್ಲ ಆಟಗಾರರು ವಿಶ್ವಕಪ್​ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್​ ಗೆಲ್ಲುವುದು ಅಸಾಧ್ಯ” ಎಂದು ಹೇಳಿದ್ದರು. ಇದೀಗ ಉಲ್ಟಾ ಹೊಡಿದು ಕಪ್​ ಗೆಲ್ಲಲಿದೆ ಎಂದ್ದಾರೆ.

2007ರ ಟಿ20 ವಿಶ್ವಕಪ್​ ಫೈನಲ್​ ಮತ್ತು 2011 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್​ ಭಾರತ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ Asian Games 2023: ಅಥ್ಲೀಟ್‌ಗಳನ್ನು ಅಭಿನಂದಿಸುವ ಭರದಲ್ಲಿ ಆಶಾ ಭೋಂಸ್ಲೆ,ಗಂಭೀರ್, ಲಕ್ಷ್ಮಣ್ ಭಾರಿ ಎಡವಟ್ಟು

ಅಕ್ಟೋಬರ್ 5 ರಿಂದ ಟೂರ್ನಿ ಆರಂಭ

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯಾ ತನ್ನ ವಿಶ್ವ ಕಪ್​ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 8 ರಂದು ಚೆನ್ನೈಯಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್​ 22ಕ್ಕೆ ನಡೆಯಲಿದೆ.

ಯುವಿ ಹೇಳಿದ ಭವಿಷ್ಯವೇನು

ವಿಶ್ವಕಪ್ ಹೀರೊ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಕೂಡ ಭಾರತ ಈ ಬಾರಿ ವಿಶ್ವಕಪ್​ ಗೆಲ್ಲುವುದು ಅನುಮಾನ ಎಂದು ಹೇಳಿದ್ದರು. ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿದ ಯುವರಾಜ್​ ಸಿಂಗ್​, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಭಾರತ ತಂಡ ಕಪ್​ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲು ಕಷ್ಟಕರ. ಏಕೆಂದರೆ ಭಾರತ ತಂಡದಲ್ಲಿ ಹಲವು ಸಮಸ್ಯೆಗಳು ಕಾಣುತ್ತಿದೆ, ಇದು ಪರಿಹಾರ ಕಾಣುವವರೆಗೆ ಕಪ್​ ಗೆಲ್ಲುವುದು ಕಷ್ಟ” ಎಂದು ಹೇಳಿದ್ದರು.

Exit mobile version