ಗುವಾಹಟಿ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ಅವರು ತವರು ನೆಲದಲ್ಲಿ 20 ಶತಕಗಳನ್ನು ಬಾರಿಸುವ ಮೂಲಕ ಭಾರತ ತಂಡದ ಪರ ದಾಖಲೆಯೊಂದನ್ನು ಬರೆದಿದ್ದರು. ಈ ಸಾಧನೆಯನ್ನು ವಿರಾಟ್ ಕೊಹ್ಲಿ ಸರಿಸಮಗೊಳಿಸಿದ್ದಾರೆ. ಅವರು ಬಾರಿಸಿದ ಶತಕದ ನೆರವಿನಿಂದ ಭಾರತ ತಂಡ ಲಂಕಾ ವಿರುದ್ಧ 373 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಇವೆಲ್ಲದರ ನಡುವೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯನ್ನು ಸಚಿನ್ ಸಾಧನೆಗೆ ಹೋಲಿಸಬೇಡಿ ಎಂದು ಹೇಳಿದ್ದಾರೆ.
ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಈಗ ಕ್ರಿಕೆಟ್ ವಿಶ್ಲೇಷಕ. ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯ ಜತೆಗೆ ಡ್ರೆಸಿಂಗ್ ರೂಮ್ ಹಂಚಿಕೊಂಡವರು. ಆದಾಗ್ಯೂ ವಿರಾಟ್ ಕೊಹ್ಲಿ ಏನೇ ಮಾಡಿದರೂ ಗಂಭೀರ್ ಅದಕ್ಕೆ ಪ್ರಶಂಸೆ ವ್ಯಕ್ತಪಡಿಸುವುದಿಲ್ಲ. ಬದಲಾಗಿ ವ್ಯತಿರಿಕ್ತ ಮಾತನ್ನು ಆಡುತ್ತಾರೆ. ಅಂತೆಯೇ ವಿರಾಟ್ ಕೊಹ್ಲಿ ಶತಕ ಬಾರಿಸಿ ಸಾಧನೆ ಮಾಡಿದಾಗಲೂ ಅದೇ ಮಾದರಿಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿಯ ಸಾಧನೆಯನ್ನು ಸಚಿನ್ ತೆಂಡೂಲ್ಕರ್ ಅವರ ಸಾಧನೆ ಹೋಲಿಸಬೇಡಿ. ಸಚಿನ್ ಅವರ ದಾಖಲೆ ದೊಡ್ಡದು. ಸಚಿನ್ ತೆಂಡೂಲ್ಕರ್ ಅವರು ಶತಕಗಳನ್ನು ಬಾರಿಸಿದ್ದ ಅವಧಿಯಲ್ಲಿ ಈಗಿನ ಕ್ರಿಕೆಟ್ ರೀತಿಯಲ್ಲಿ ಫೀಲ್ಡಿಂಗ್ ವಿನಾಯಿತಿಗಳು ಇರಲಿಲ್ಲ. ಐದು ಆಟಗಾರರು 30 ಯಾರ್ಡ್ ಸರ್ಕಲ್ನೊಳಗೆ ನಿಲ್ಲಬೇಕು ಎಂಬ ನಿಯಮವೂ ಇರಲಿಲ್ಲ. ಹೀಗಾಗಿ ಸಚಿನ್ಗೆ ಬ್ಯಾಟ್ ಮಾಡುವುದು ಸುಲಭವಾಗಿರಲಿಲ್ಲ. ಅಂಥ ಪರಿಸ್ಥಿತಿಯಲ್ಲೂ ಅವರು ಶತಕಗಳನ್ನು ಬಾರಿಸಿದ್ದ ದೊಡ್ಡ ವಿಷಯ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಇದೇ ವೇಳೆ ಶ್ರೀಲಂಕಾ ತಂಡದ ಬೌಲಿಂಗ್ ಕೂಡ ಚೆನ್ನಾಗಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿಗೆ ಶತಕ ಬಾರಿಸಲು ಸಾಧ್ಯವಾಯಿತು ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ | Virat kohli | ಎರಡು ಜೀವದಾನ ಪಡೆದಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಿದ ವಿರಾಟ್ ಕೊಹ್ಲಿ