ನವದೆಹಲಿ: ಗೌತಮ್ ಗಂಭೀರ್ ಹೋದಲೆಲ್ಲ ವಿರಾಟ್ ಕೊಹ್ಲಿ ಅಭಿಮಾನಿಗಳು ಅವರಿಗೆ ಕಾಟ ಕೊಡುತ್ತಾರೆ. ಅವರು ನಡೆಯುವಾಗಲೂ, ಕುಳಿತಿರುವಾಗಲೂ ಕೊಹ್ಲಿ, ಕೊಹ್ಲಿ ಎಂದು ಕೂಗುವ ಮೂಲಕ ಕೋಪ ಬರಿಸುತ್ತಾರೆ. ಅದೇ ರೀತಿ ಶ್ರೀಲಂಕಾದಲ್ಲಿ ಏಷ್ಯಾ ಕಪ್ ನಡೆಯುವ ವೇಳೆಯೂ ಇದೇ ರೀತಿಯ ಘಟನೆ ನಡೆಯಿತು. ಕೋಪಗೊಂಡ ಗಂಭೀರ್ ತಮ್ಮ ಎಲ್ಲ ಘನತೆ, ಗೌರವ ಹಾಗೂ ಗಂಭೀರತೆಯನ್ನು ದಾಟಿ ಅಶ್ಲೀಲ ಸನ್ನೆ (ಮಿಡಲ್ ಫಿಂಗರ್) ತೋರಿ ಟೀಕೆಗೆ ಒಳಗಾಗಿದ್ದಾರೆ.
ಕ್ಯಾಂಡಿಯ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನೇಪಾಳ ಏಷ್ಯಾ ಕಪ್ 2023 ರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಏಷ್ಯಾಕಪ್ ಪಂದ್ಯದ ವೇಳೆ ಗಂಭೀರ್ ತಮ್ಮ ಕಾಮೆಂಟರಿ ಸ್ಟ್ಯಾಂಡ್ನಿಂದ ಹೊರನಡೆಯುತ್ತಿದ್ದಾಗ ಅಭಿಮಾನಿಗಳು ಕೂಗಿದ್ದಾರೆ. ವಿಶ್ವಕಪ್ ವಿಜೇತ ಆಟಗಾರ ಗಂಭೀರ್ ನಡೆದುಕೊಂಡು ಹೋಗುತ್ತಿದ್ದಾಗ, ಮತ್ತೊಂದು ಸ್ಟ್ಯಾಂಡ್ನಿಂದ ಸಾಕಷ್ಟು ಅಭಿಮಾನಿಗಳು ವಿರಾಟ್ ಕೊಹ್ಲಿಯ ಹೆಸರನ್ನು ಕೂಗಿದ್ದಾರೆ. ಅದು ತಮ್ಮನ್ನು ಉದ್ದೇಶಿಸಿಯೇ ಮಾಡುತ್ತಿದ್ದಾರೆ ಎಂದು ತಿಳಿದ ಅವರು ಕೋಪಗೊಂಡು ತಮ್ಮ ಬಲಗೈಯನ್ನು ಜೇಬಿನಿಂದ ಹೊರತೆಗೆದು ಅವರೆಲ್ಲರಿಗೂ ಅಶ್ಲೀಲ ಸನ್ನೆ ಮಾಡಿದ್ದಾರೆ.
ವೀಡಿಯೊದ ಕೊನೆಯಲ್ಲಿ, ಗಂಭೀರ್ ಮಳೆಯಲ್ಲಿ ಛತ್ರಿ ಹಿಡಿದಿರುವ ವ್ಯಕ್ತಿಯೊಂದಿಗೆ ನಡೆಯುವುದನ್ನು ಕಾಣಬಹುದು.
ಭಾರತ ವಿರೋಧಿ ಘೋಷಣೆಗೆ ಕೈ ಸನ್ನೆ ಎಂದ ಗಂಭೀರ್
ವೀಡಿಯೊ ವೈರಲ್ ಆದ ನಂತರ ಮಾಜಿ ಕ್ರಿಕೆಟಿಗ ನಂತರ ತನ್ನ ಸನ್ನೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಗಂಭೀರ್ ಅವರನ್ನು ಮಧ್ಯದ ಬೆರಳನ್ನು ತೋರಿಸಲು ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ.
ಡಾನ್ಸ್ ಮಾಡಿದ ಕೊಹ್ಲಿ
ಪಲ್ಲೆಕೆಲೆ: ಏಷ್ಯಾಕಪ್ 2023ರ (Asia Cup 2023) ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿತು. ಅರಂಭಿಕ 26 ಎಸೆತಗಳ ಒಳಗೆ ಮೂರು ಬಾರಿ ಕ್ಯಾಚ್ ಬಿಡುವ ಮೂಲಕ ಭಾರತ ತಂಡ ಟೀಕೆಗೆ ಒಳಗಾಯಿತು. ಇದರಲ್ಲೊಂದು ಸುಲಭ ಕ್ಯಾಚ್ ಬಿಟ್ಟವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ. ಈ ಕ್ಯಾಚ್ಗಳು ಭಾರತದ ಪಾಲಿಗೆ ಹಿನ್ನಡೆ ಉಂಟು ಮಾಡಿದವು. ಇಷ್ಟೆಲ್ಲ ಅಪಹಾಸ್ಯಕ್ಕೆ ಒಳಗಾದ ನಡುವೆಯೂ ವಿರಾಟ್ ಕೊಹ್ಲಿ ನೇಪಾಳಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ : Virat Kohli: ಸುಲಭ ಕ್ಯಾಚ್ ಕೈಬಿಟ್ಟು ‘ಚೋಕ್ಲಿ’ ಆದ ವಿರಾಟ್ ಕೊಹ್ಲಿ
ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಶಾರ್ಟ್ ಕವರ್ನಲ್ಲಿ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈಬಿಟ್ಟಿದ್ದರಿಂದ ಭಾರತೀಯ ಅಭಿಮಾನಿಗಳಿಗೆ ಬೇಸರ ಉಂಟಾಯಿತು. ಈ ಕ್ಯಾಚ್ ಡ್ರಾಪ್ ನಂತರ ನೇಪಾಳದ ಆಟಗಾರ ಆಸಿಫ್ ಶೇಖ್ ಅರ್ಧಶತಕ ಗಳಿಸಿ ತಮ್ಮ ತಂಡದ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು.
ಕೊಹ್ಲಿ ಅಂತಿಮವಾಗಿ 30 ನೇ ಓವರ್ನಲ್ಲಿ ಶೇಖ್ ಅವರ ಇನಿಂಗ್ಸ್ಗೆ ತರೆ ಎಳೆದರು. ಅಸಾಧಾರಣ ಒಂದು ಕೈ ಕ್ಯಾಚ್ ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಭಾರತದ ಮಾಜಿ ನಾಯಕ ಶೇಖ್ ಅವರ ಬ್ಯಾಟ್ನಿಂದ ಎತ್ತರಕ್ಕೆ ಜಿಗಿದಿದ್ದ ಚೆಂಡನ್ನು ಹಿಡಿಯಲು ಸಿಕ್ಕಾಪಟ್ಟೆ ಕಷ್ಟಪಟ್ಟರು. ಅದೇ ಸ್ಥಾನದಲ್ಲಿ ಅವರು ಈ ಹಿಂದೆ ಕ್ಯಾಚ್ ಬಿಟ್ಟಿದ್ದರು.
ಅದಕ್ಕಿಂತ ಮೊದಲು ಹತ್ತನೇ ಓವರ್ನಲ್ಲಿ ಎದುರಾಳಿ ತಂಡದ ಮೊದಲು ವಿಕೆಟ್ ಪಡೆಯಲು ಯಶಸ್ವಿಯಾದ ನಂತರ ಭಾರತೀಯ ಆಟಗಾರರು ನಿರಾಳರಾದರು. ಅದರಲ್ಲೂ ವಿರಾಟ್ 14 ನೇ ಓವರ್ ಮುಗಿದ ನಂತರ ನೇಪಾಳಿ ಕುತು ಮಾ ಕುತುಗೆ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.