ಕೋಲ್ಕತ್ತಾ: ಗೌತಮ್ ಗಂಭೀರ್(Gautam Gambhir) ಅವರು ಟೀಮ್ ಇಂಡಿಯಾದ ಕೋಚ್(Team India Coach) ಆಗುವುದು ಬಹುತೇಕ ಖಚಿತ. ಕೆಕೆಆರ್(KKR) ತಂಡದ ಮೆಂಟರ್ ಆಗಿದ್ದ ಅವರು ಇದೀಗ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಗಂಭೀರ್ ಶೀಘ್ರದಲ್ಲೇ ಕೋಚ್ ಆಗುವುದು ನಿಶ್ಚಿತ. ಕೆಕೆಆರ್ ಫ್ರಾಂಚೈಸಿ ಮುಂದಿನ ಶುಕ್ರವಾರ ಕೋಲ್ಕತಾದಲ್ಲಿ ಗಂಭೀರ್ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ. ದ್ರಾವಿಡ್ ಅವರಿಂದ ತೆರವಾದ ಸ್ಥಾನವನ್ನು ಗಂಭೀರ್ ಭರ್ತಿ ಮಾಡಲಿದ್ದಾರೆ. ಬಿಸಿಸಿಐ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ. . ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಕೆಳವು ದಿನಗಳ ಹಿಂದೆ ಗಂಭೀರ್ ಜತೆ ವಿ. ರಾಮನ್(WV Raman) ಕೂಡ ಕೋಚ್ ರೇಸ್ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಗೂ ಬಿಸಿಸಿಐ ಗಂಭೀರ್ಗೆ ಮಣೆ ಹಾಕಿದಂತಿದೆ.
ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್ ಕಂಡ ಬೆಸ್ಟ್ ಫೀಲ್ಡರ್ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್ ಕೋಚ್(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ Gautam Gambhir : ಕೊಹ್ಲಿಯನ್ನು ತಂಡದಿಂದ ಹೊರಗಿಡಿ; ಕೋಚ್ ಆಗಲು ಗಂಭೀರ್ ಒಡ್ಡಿದ್ದ ಷರತ್ತು ಒಪ್ಪಿದ ಬಿಸಿಸಿಐ
ಈ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ ತಂಡಕ್ಕೆ ಯಶಸ್ವಿ ಮಾರ್ಗದರ್ಶನ ನೀಡಿ ತಂಡವನ್ನು ಚಾಂಪಿಯನ್ ಮಾಡಿದ ಗಂಭೀರ್, ರಾಹುಲ್ ದ್ರಾವಿಡ್ ಅವರ ಸ್ಥಾನ ತುಂಬಲು ಅರ್ಹರು ಎಂದು ಬಿಸಿಸಿಐ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಗಂಭೀರ್ ಕೋಚ್ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.
ಗಂಭೀರ್ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್ನಲ್ಲಿ ಇದೀಗ ಟೀಮ್ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್ ಅವರ ಅಭಯಹಸ್ತದಿಂದ ರೋಡ್ಸ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ