ಮುಂಬಯಿ : ಇಷ್ಟು ದಿನಗಳ ಕಾಲ ವಿರಾಟ್ ಕೊಹ್ಲಿಯ ಕಡೆಗೆ ಎಸೆಯಲಾಗುತ್ತಿದ್ದ ಟೀಕಾಸ್ತ್ರಗಳನ್ನು ಇದೀಗ ಕನ್ನಡಿಗ ಕ್ರಿಕೆಟಿಗ ಕೆ. ಎಲ್. ರಾಹುಲ್ ಕಡೆಗೆ ತಿರುಗಿಸಿದ್ದಾರೆ ಹಿರಿಯ ಕ್ರಿಕೆಟಿಗರು. ಮುಂದಿನ ವಿಶ್ವ ಕಪ್‌ಗೆ ತಂಡವನ್ನು ಆಯ್ಕೆ ಮಾಡುವ ಉದ್ದೇಶಕ್ಕೆ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಅವರಿಗೆ ಏಷ್ಯಾ ಕಪ್‌ನಲ್ಲಿ ಅವಕಾಶ ನೀಡಲಾಗಿದೆ. ಅದರಲ್ಲಿ ರೋಹಿತ್ ಶರ್ಮ ನಾಯಕರಾಗಿದ್ದರೆ, ವಿರಾಟ್ ಕೊಹ್ಲಿ ಹಾಂಕಾಂಗ್ ವಿರುದ್ಧ ಅರ್ಧ ಶತಕ ಬಾರಿಸುವ ಮೂಲಕ ನಿಧಾನವಾಗಿ ಫಾರ್ಮ್ ಕಂಡುಕೊಳ್ಳುತ್ತಿದ್ದಾರೆ. ಆದರೆ, ಪಾಕ್ ವಿರುದ್ಧ ಶೂನ್ಯ ಹಾಗೂ ಹಾಂಕಾಂಗ್ ವಿರುದ್ದ ೩೫ ರನ್ ಮಾತ್ರ ಗಳಿಸಿದ್ದ ಕೆ. ಎಲ್ ರಾಹುಲ್ ಅವರ ಪ್ರದರ್ಶನದ ಬಗ್ಗೆ ವಿಮರ್ಶೆಗಳು ಆರಂಭಗೊಂಡಿವೆ.
ರಾಹುಲ್ ಅವರು ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಸತತವಾಗಿ ವೈಫಲ್ಯ ಕಾಣುತ್ತಿರುವ ಅವರು ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಳ್ಳಲೇಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ, ಅವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದೇ ಹೋದರೆ, ಉತ್ತಮ ಫಾರ್ಮ್‌ನಲ್ಲಿರುವ ಶುಬ್ಮನ್ ಗಿಲ್‌ಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಮಾತನಾಡಿದ ಮಾಜಿ ಆರಂಭಿಕ ಬ್ಯಾಟರ್ ಸುನೀಲ್ ಗವಾಸ್ಕರ್ “ಶುಬ್ಮನ್ ಗಿಲ್ ಅವರು ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಗಿಲ್ ಉತ್ತಮವಾಗಿ ಆಡಿದ್ದಾರೆ. ಹೀಗಾಗಿ ಮುಂಬರುವ ವಿಶ್ವ ಕಪ್‌ಗೆ ತಂಡವನ್ನು ಆಯ್ಕೆ ಮಾಡುವ ವೇಳೆ ಫಾರ್ಮ್‌ನಲ್ಲಿ ಇರುವ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ,” ಎಂದು ಹೇಳಿದ್ದಾರೆ.
“ಹೆಚ್ಚು ಅವಕಾಶಗಳನ್ನು ನೀಡುವ ಸಾಧ್ಯತೆಗಳು ಈಗಿಲ್ಲ. ಒಂದೆರಡು ಪಂದ್ಯಗಳ ಬಳಿಕ ಬ್ಯಾಟರ್ ಒಬ್ಬರು ಫಾರ್ಮ್‌ಗೆ ಮರಳಬೇಕಾಗುತ್ತದೆ. ವಿಶ್ವ ಕಪ್‌ನಲ್ಲಿ ಕಠಿಣ ಸವಾಲುಗಳಿರುತ್ತವೆ. ಹೀಗಾಗಿ ರಾಹುಲ್ ಅವರಿಗೆ ಕೆಲವೇ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ,” ಎಂದು ಹೇಳಿದರು.
ಇದನ್ನೂ ಓದಿ | Team India | ಕೆ. ಎಲ್ ರಾಹುಲ್ ಸ್ಥಾನ ಕಸಿಯಲಿದ್ದಾರೆ ಹಾರ್ದಿಕ್ ಪಾಂಡ್ಯ