Site icon Vistara News

Euro 2024: ಯುರೋ ಕಪ್ ಫುಟ್ಬಾಲ್ ಟೂರ್ನಿ; ನಾಕೌಟ್ ಹಂತಕ್ಕೇರಿದ ಜರ್ಮನಿ

Euro 2024

Euro 2024: Germany confirms Round of 16 qualification after 2-0 win against Hungary

ಸ್ಟುಟ್​ಗಾರ್ಟ್​: ಯುರೋ ಕಪ್ ಫುಟ್ಬಾಲ್(Euro 2024)​ ಟೂರ್ನಿಯಲ್ಲಿ ಆತಿಥೇಯ ಜರ್ಮನಿ(Germany) ತಂಡ ನಾಕೌಟ್​ ಹಂತಕ್ಕೇರಿದೆ. ಬುಧವಾರ ರಾತ್ರಿ ನಡೆದ ಎ ಗುಂಪಿನ ಪಂದ್ಯದಲ್ಲಿ ಎದುರಾಳಿ ಹಂಗೇರಿಯನ್ನು(Hungary) 2-0 ಗೋಲುಗಳಿಂದ ಮಗುಚಿ ಹಾಕುವ ಮೂಲಕ ಈ ಸಾಧನೆ ಮಾಡಿದೆ. ಈ ಗೆಲುವಿನೊಂದಿಗೆ ಜರ್ಮನಿ ಹಾಲಿ ಆವೃತ್ತಿಯಲ್ಲಿ ಮೊದಲ ತಂಡವಾಗಿ 16ರ ಘಟಕ್ಕೆ ತಲುಪಿತು. ದಿನದ ಕ್ರೊವೇಷಿಯಾ ಮತ್ತು ಅಲ್ಬೇನಿಯಾ ನಡುವಣ ದಿನದ ಮತ್ತೊಂದು ಪಂದ್ಯ 2-2 ಗೋಲುಗಳ ಅಂತರದಿಂದ ಡ್ರಾ ಗೊಂಡಿತು.

ಸ್ಟಟ್‌ ಗಾರ್ಟ್​ನಲ್ಲಿ ಕಿಕ್ಕಿರಿದು ನೆರೆದ ತವರಿನ ಅಭಿಮಾನಿಗಳ ಮುಂದೆ ಜರ್ಮನಿ ಶ್ರೇಷ್ಠ ಆಟವಾಡಿ ಗೆಲುವು ಸಾಧಿಸುವ ಜತೆಗೆ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಒದಗಿಸಿತು. ಸ್ಕಾಟ್ಲೆಂಡ್​ ವಿರುದ್ಧ ಉದ್ಘಾಟನ ಪಂದ್ಯದಲ್ಲಿ 5-1 ಗೋಲು ಬಾರಿಸಿ ಮೆರೆದಾಡಿದ್ದ ಜರ್ಮನಿ ತಂಡ ಹಂಗೇರಿ ವಿರುದ್ಧದವೂ ಗೆದ್ದು ಬೀಗಿತು.

21 ವರ್ಷದ ಜಮಾಲ್​ ಮೂಸಿಯಾಲ 22ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಜರ್ಮನಿಗೆ ಮುನ್ನಡೆ ತಂದು ಕೊಟ್ಟರು. ಇದಾಗ ಬಳಿಕ ನಾಯಕ ಇಲ್ಕೆ ಗುಂಡೋಕನ್​ 67ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು.

ಡ್ರಾದಲ್ಲಿ ಅಂತ್ಯ ಕಂಡ ಕ್ರೊವೇಷಿಯಾ ಮತ್ತು ಅಲ್ಬೇನಿಯಾ ಪಂದ್ಯ

ಕ್ರೊವೇಷಿಯಾ ಮತ್ತು ಅಲ್ಬೇನಿಯಾ ತಂಡಗಳು ಡ್ರಾ ಸಾಧಿಸಿದ ಕಾರಣ ಬಿ ಗುಂಪಿನಿಂದ ನಾಕೌಟ್​ ಹಂತಕ್ಕೇರುವ ಇತ್ತಂಡಗಳ ಹಾದಿ ದುರ್ಗಮವಾಗಿದೆ. ಕ್ರೊವೇಷಿಯಾ ತಂಡ ಆರಂಭಿಕ ಹಂತದ ಆಟದಲ್ಲಿ ಹಿನ್ನಡೆ ಅನುಭವಿಸಿದರೂ ಕೂಡ ದ್ವಿತಿಯಾರ್ಧದಲ್ಲಿ ಪುಡಿದೆದ್ದು ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡಿತು. ಪಂದ್ಯ ಆರಂಭಗೊಂಡ 11ನೇ ನಿಮಿಷಕ್ಕೆ ಅಲ್ಬೇನಿಯಾ ಗೋಲಿನ ಖಾತೆ ತೆರೆಯಿತು. ಈ ಗೋಲನ್ನು ಖಜಿಮ್​ ಲಸಿ ಬಾರಿಸಿದರು.

ಇದನ್ನೂ ಓದಿ Euro 2024: ಅಂತಿಮ ಹಂತದಲ್ಲಿ ಗೋಲು ಬಾರಿಸಿ ಪೋರ್ಚುಗಲ್​ಗೆ ರೋಚಕ ಗೆಲುವು ತಂದ ಫ್ರಾನ್ಸಿಸ್ಕೊ

74ನೇ ನಿಮಿಷದಲ್ಲಿ ಕ್ರೊವೇಷಿಯಾ ತಂಡದ ಆಟಗಾರ ಆಂಡ್ರೆಜ್​ ಕ್ರಾಮರಿಕ್​ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು. ಈ ಗೋಲು ಸಿಡಿದ 4 ನಿಮಿಷದ ಅಂತರದಲ್ಲಿ ಕ್ಲೌಸ್​​ ಗಸುಲಾ ಸ್ವಗೋಲಿನ ಎಡವಟ್ಟು ಮಾಡಿಕೊಂಡರು ಇದರಿಂದ ಕ್ರೊವೇಷಿಯಾ 2-1 ಮುನ್ನಡೆ ಸಾಧಿಸಿತು. ಆದರೆ ಹೆಚ್ಚುವರಿ ಸಮಯದ ಆಟದಲ್ಲಿ ಕ್ಲೌಸ್ ಗೋಲು ಬಾರಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ತನ್ನ ಸ್ವಗೋಲಿನ ತಪ್ಪಿಗೆ ನ್ಯಾಯ ಒದಗಿಸಿದರು. ಒಂದೊಮ್ಮೆ ಅವರು ಈ ಗೋಲು ಬಾರಿಸದೇ ಹೋಗಿದ್ದರೆ ತಂಡದ ಪಾಲಿಗೆ ವಿಲನ್​ ಆಗುತ್ತಿದ್ದರು.

ಇಂದು ನಡೆದ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ಮತ್ತು ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಕೂಡ 1-1​ ಗೋಲು ಅಂತರದಿಂದ ಸಮಬಲಗೊಂಡಿತು.

Exit mobile version