ಹೈದರಬಾದ್: ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ (Shubman Gill) ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ್ದಾರೆ. ಇದು ಅವರ ವೃತ್ತಿ ಕ್ರಿಕೆಟ್ನ ಚೊಚ್ಚಲ ದ್ವಿ ಶತಕ ಹಾಗೂ ಭಾರತ ತಂಡದ ಪರವಾಗಿ ಈ ಸಾಧನೆ ಮಾಡಿರುವ ಐದನೇ ಆಟಗಾರ. ಈ ಹಿಂದೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಈ ದ್ವಿ ಶತಕದ ಸಾಧನೆ ಮಾಡಿದ್ದರು. ಪಂದ್ಯದಲ್ಲಿ ಭಾರತ ತಂಡ 12 ರನ್ಗಳಿಂದ ಜಯ ಸಾಧಿಸಿದ ಕಾರಣ ಗಿಲ್ ದ್ವಿಶತಕದ ಸಾಧನೆಗೆ ಹೆಚ್ಚು ಮೌಲ್ಯ ಬಂದಿತ್ತು. ಹೀಗಾಗಿ ಪಂದ್ಯ ಮುಗಿದ ಬಳಿಕ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು.
ಪಂದ್ಯದ ಗೆಲುವಿನ ಬಳಿಕ ನಡೆದ ಪ್ರಶಸ್ತಿಗಳ ವಿತರಣಾ ಸಮಾರಂಭದ ಬಳಿಕ ಕೇಕ್ ಕಟ್ ಮಾಡಲಾಯಿತು. ಎಲ್ಲ ಆಟಗಾರರ ಸಮ್ಮುಖದಲ್ಲಿ ಶುಭ್ಮನ್ ಗಿಲ್ ದೊಡ್ಡ ಕೇಕ್ ತುಂಡರಿಸಿ ಸಂಭ್ರಮಿಸಿದರು. ಬಳಿಕ ಸಹ ಸದಸ್ಯರಿಗೆ ಗಿಲ್ ಆಟದ ವೈಖರಿಯನ್ನು ಬಣ್ಣಿಸುವಂತೆ ಕೋರಲಾಯಿತು.
ಹಾರ್ದಿಕ್ ಪಾಂಡ್ಯ, ಇದು ನಾನು ನನ್ನ ಜೀವನದಲ್ಲಿ ನೋಡಿ ಅತ್ಯುತ್ತಮ ಇನಿಂಗ್ಸ್ ಎಂದು ಹೇಳಿದರೆ, ಇದೊಂದು ಅತ್ಯುಷ್ಕೃಷ್ಟ ಬ್ಯಾಟಿಂಗ್ ಎಂದು ರನ್ ಮೆಷಿನ್ ವಿರಾಟ್ ಕೊಹ್ಲಿ ಹೊಗಳಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಅವರು ಶುಭ್ಮನ್ ಗಿಲ್ ತನ್ನ ಬ್ಯಾಟಿಂಗ್ ಶಕ್ತಿಯ ಸಂಭಾವ್ಯತೆಯನ್ನು ಪ್ರದರ್ಶಿಸಿದ್ದಾರೆ. ಇನ್ನಷ್ಟು ಇನಿಂಗ್ಸ್ಗಳನ್ನು ನೋಡಲು ಸಾಧ್ಯ ಎಂದಿದ್ದಾರೆ.
ಮೊಹಮ್ಮದ್ ಸಿರಾಜ್ ಇದೊಂದು ಅವಿಸ್ಮರಣೀಯ ಇನಿಂಗ್ಸ್ ಎಂದು ಹೇಳಿದರೆ, ಶಾರ್ದುಲ್ ಠಾಕೂರ್ ವಿಶೇಷ ಕಲೆ ಎಂದು ಹೇಳಿದ್ದಾರೆ. ಸ್ಪಿನ್ನರ್ ಯಜ್ವೇಂದ್ರ ಚಹಲ್ ಅವರು ಅದ್ಭುತ ಬ್ಯಾಟಿಂಗ್. ನಿನ್ನೆ ರಾತ್ರಿ ನಾನು 50 ಓವರ್ಗಳ ತನಕವೂ ಬ್ಯಾಟ್ ಮಾಡುವಂತೆ ಕೋಚಿಂಗ್ ಕೊಟ್ಟಿದ್ದೆ ಎಂಬುದಾಗಿ ಎಂದಿನಂತೆ ತಮಾಷೆಯಾಡಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು, ಇಂಥದ್ದೊಂದ ಇನಿಂಗ್ಸ್ ನಿರೀಕ್ಷೆ ಮಾಡಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Shubhman Gill | ದ್ವಿಶತಕ ಬಾರಿಸಿದ್ದು ಶುಭ್ಮನ್ ಗಿಲ್, ಟ್ರೆಂಡ್ ಆಗಿದ್ದು ಸಾರಾ ತೆಂಡೂಲ್ಕರ್!