ಮುಂಬಯಿ: 18 ಆವೃತ್ತಿಯ ಐಪಿಎಲ್(IPL 2025) ಟೂರ್ನಿಯ ಆಟಗಾರರ ಮೆಗಾ ಹರಾಜಿಗೆ ಇನ್ನೂ 4 ತಿಂಗಳು ಬಾಕಿ ಇದ್ದರೂ ಕೂಡ ಎಲ್ಲ 10 ಫ್ರಾಂಚೈಸಿಗಳು ಈಗಿನಿಂದಲೇ ಪೂರ್ವ ತಯಾರಿ ಆರಂಭಿಸಿದೆ. ಯಾವ ಆಟಗಾರರನ್ನು ಉಳಿಸುವುದು? ಜತೆಗೆ ಯಾರನ್ನೆಲ್ಲ ಖರೀದಇ ಮಾಡಬಹುದೆಂಬ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದೆ. ಇದೀಗ ಆಸ್ಟ್ರೇಲಿಯಾದ ಆಲ್ರೌಂಡರ್, ಆರ್ಸಿಬಿ ಪರ ಆಡುವ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಅವರನ್ನು ಖರೀದಿಸಲು ಮೂರು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿದೆ ಎಂದು ವರದಿಯಾಗಿದೆ.
ಆರ್ಸಿಬಿ ಈ ಬಾರಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಆಟಗಾರರನ್ನು ತಂಡದಿಂದ ಕೈ ಬಿಡಲಿದೆ ಎಂದು ವರದಿಯಾದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್ಸಿಬಿ ಉಳಿಸಿಕೊಳ್ಳುವ ಬಗ್ಗೆ ಒಲವು ತೋರಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲವು ದಿನಗಳ ಹಿಂದೆ ಮ್ಯಾಕ್ಸ್‌ವೆಲ್ ಆರ್ಸಿಬಿಯ ಇನ್ಸ್ಟಾಗ್ರಾಮ್ ಖಾತೆಯನ್ನು ಅನ್ಫಾಲೋ ಮಾಡಿದ್ದರು. ಮೂಲಗಳ ಪ್ರಕಾರ ಆರ್ಸಿಬಿ ವಿರಾಟ್ ಕೊಹ್ಲಿ, ಇಂಗ್ಲೆಂಡ್ನ ವಿಲ್ ಜಾಕ್ಸ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ಬಾರಿಯ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಆರ್ಸಿಬಿ ಪರ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇಲವ 52 ರನ್ ಮಾತ್ರ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ. 2021 ರ ಐಪಿಎಲ್ಗೂ ಮುನ್ನ ನಡೆದ ಹರಾಜಿನಲ್ಲಿ ಬರೋಬ್ಬರಿ 14.25 ಕೋಟಿ ರೂ. ಪಡೆದು ಆರ್ಸಿಬಿ ತಂಡವನ್ನು ಸೇರಿದ್ದರು. ಇದೀಗ ಅವರನ್ನು ಈ ಬಾರಿಯ ಹರಾಜಿನಲ್ಲಿ ಖರೀದಿಸಲು ಮೂರು ತಂಡಗಳು ಪೈಪೋಟಿ ನಡೆಸಿವೆ ಎನ್ನಲಾಗಿದೆ. ಈ ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಎಂದು ತಿಳಿದುಬಂದಿದೆ. ಈ ಮೂರು ತಂಡಗಳ ಪರವಾಗಿಯೂ ಮ್ಯಾಕ್ಸ್‌ವೆಲ್ ಹಿಂದೆ ಆಡಿದ್ದರು.
ಇದನ್ನೂ ಓದಿ IPL 2025: ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಇಷ್ಟು ಆಟಗಾರರ ರಿಟೇನ್ಗೆ ಅವಕಾಶ ನೀಡಲಿದೆ ಬಿಸಿಸಿಐ
ಟಿ20 ವಿಶ್ವಕಪ್ ಟೂರ್ನಿಯಲ್ಲೂ ಮ್ಯಾಕ್ಸ್‌ವೆಲ್ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾರಣದಿಂದ ಅವರಿಗೆ ಈ ಬಾರಿ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವುದು ಅನುಮಾನ.
6 ಆಟಗಾರರ ರಿಟೇನ್ಗೆ ಅವಕಾಶ?
ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಕೊನೆಗೂ ಬಿಸಿಸಿಐ(BCCI) ಮುಂದಿನ ಐಪಿಎಲ್(IPL 2025) ಮೆಗಾ(mega auction) ಹರಾಚಿನಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 4ರ ಬದಲಾಗಿ 6 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ ಎಂದು ವರದಿಯಾಗಿದೆ. ಬಿಸಿಸಿಐ ಈ ಮುನ್ನ ಗರಿಷ್ಠ 4 ಆಟಗಾರರ ರಿಟೇನ್ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತ್ತು. ಅಲ್ಲದೆ 2022ರಲ್ಲಿಯೂ 4 ಆಟಗಾರರ ರಿಟೇನ್ ಅವಕಾಶ ನೀಡಿತ್ತು. ಈ ಬಾರಿ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೆನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿತ್ತು. ಇದೀಗ ಬಿಸಿಸಿಐ 6 ಆಟಗಾರರ ರಿಟೇನ್ಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.