ಸಿಡ್ನಿ: ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ(ICC ODI World Cup) ಇನ್ನು ಕೇವಲ ಒಂದು ತಿಂಗಳ ಕಾಲಾವಧಿ ಮಾತ್ರ ಬಾಕಿ ಉಳಿದಿದೆ. ಈ ಮಹತ್ವದ ಟೂರ್ನಿಗೆ ಆಸ್ಟ್ರೇಲಿಯಾ ಈಗಾಗಲೇ ಸಂಭಾವ್ಯ ತಂಡವನ್ನು ಕೂಡ ಪ್ರಕಟಿಸಿದೆ. ಆದರೆ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಗಾಯಗೊಂಡಿದ್ದು ವಿಶ್ವಕಪ್ ಟೂರ್ನಿಗೆ ಅನುಮಾನ ಎನ್ನಲಾಗಿದೆ. ಆಸ್ಟ್ರೇಲಿಯಾ ತಂಡ ತನ್ನ ಮೊದಲ ಪಂದ್ಯವನ್ನು ಭಾರತ ವಿರುದ್ಧ ಅಕ್ಟೋಬರ್ 8ರಂದು ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ.
ಅಭ್ಯಾಸದ ವೇಳೆ ಗಾಯಗೊಂಡ ಮ್ಯಾಕ್ಸಿ
ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಬುಧವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಟಿ20 ಸರಣಿಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಕ್ಕೀಡಾಗಿದ್ದಾರೆ. ಬ್ಯಾಟಿಂಗ್ ಅಭ್ಯಾಸದಲ್ಲಿರುವಾಗ ಪಾದದ ನೋವು(Glenn Maxwell Injury) ಕಾಣಿಸಿಕೊಂಡಿದೆ. ಗಾಯದಿಂದ ಬಳಲಿದ ಅವರು ಈ ಸರಣಿಯನ್ನು ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಆಸ್ಟ್ರೇಲಿಯಾಕ್ಕೆ ಬಂದು ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ Glenn Maxwell | ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಬಿದ್ದು ಕಾಲು ಮುರಿದುಕೊಂಡ ಮ್ಯಾಕ್ಸ್‌ವೆಲ್
ಗಾಯದ ಬಗ್ಗೆ ಮಾಹಿತಿ ನೀಡಿದ ಆಸೀಸ್ ಕ್ರಿಕೆಟ್ ಮಂಡಳಿ, “ಮ್ಯಾಕ್ಸ್‌ವೆಲ್ ಅವರಿಗೆ ಸ್ಕ್ಯಾನ್ ಮಾಡಲಾಗಿದ್ದು ವೈದ್ಯಕೀಯ ಸಿಬ್ಬಂದಿಯ ಸಲಹೆಯಂತೆ ಅವರಿಗೆ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅವರು ತವರಿಗೆ ಮರಳಲಿದ್ದಾರೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ(cricket australia) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವಕಪ್ಗೆ ಅನುಮಾನ
ಹಿಂದೊಮ್ಮೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್‌ವೆಲ್ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್‌ವೆಲ್ ಹೊರಬಿದ್ದಿದ್ದರು. ಇದೀಗ ಮತ್ತೆ ಪಾದದ ನೋವಿನ ಗಾಯಕ್ಕೆ ಈಡಾಗಿದ್ದು ವಿಶ್ವಕಪ್ ಟೂರ್ನಿಗೆ ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಮ್ಯಾಕ್ಸ್‌ವೆಲ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರೆ ವಿಶ್ರಾಂತಿ ಅಗತ್ಯ. ವಿಶ್ವಕಪ್ಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಫಿಟ್ನೆಸ್ ಪಾಸ್ ಆಗಿ ಕಮ್ಬ್ಯಾಕ್ ಮಾಡುವುದು ಕಷ್ಟ. ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ಭಾರತ ವಿರುದ್ಧ ಮೂರು ಏಕದಿನ ಪಂದ್ಯವನ್ನು ಆಡಲಿದೆ. ಈ ಸರಣಿಗೆ ಮ್ಯಾಕ್ಸ್‌ವೆಲ್ ಆಯ್ಕೆ ಮಾಡುವ ಕುರಿತು ಯೋಚನೆ ಮಾಡಬೇಕಿದೆ ಎಂದು ಆಯ್ಕೆ ಸಮಿತಿಯ ಅಧಿಕಾರಿ ಟೋನಿ ಡೊಡಮೈಡ್ ತಿಳಿಸಿದ್ದಾರೆ.
ಅಕ್ಟೋಬರ್ 5ರಿಂದ ವಿಶ್ವಕಪ್
ಆಸ್ಟ್ರೇಲಿಯಾ ತಂಡ 18 ಸದಸ್ಯರ ಸಂಭಾವ್ಯ ತಂಡವನ್ನು(preliminary World Cup squad) ಪ್ರಕಟಿಸಿದೆ. ಅನುಭವಿ ವೇಗಿ ಪ್ಯಾಟ್ ಕಮಿನ್ಸ್(Pat Cummins) ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ(icc world cup 2023 schedule) ವಿಶ್ವಕಪ್ ಟೂರ್ನಿ ನಡೆಯಲಿದೆ.
ಸ್ಯದ ಈಗಿನ ಪಟ್ಟಿಯ ಪ್ರಕಾರ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಆಸೀಸ್ ಇನಿಂಗ್ಸ್ ಆರಂಭಿಸಲಿದ್ದಾರೆ. ಒಂದೊಮ್ಮೆ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಾರ್ನರ್ ನಿರೀಕ್ಷಿತ ಪ್ರದರ್ಶನ ತೋರದೇ ಇದಲ್ಲಿ ಅವರ ಸ್ಥಾನದಲ್ಲಿ ಮಿಚೆಲ್ ಮಾರ್ಷ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ.
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬೋಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಥಾನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ