Site icon Vistara News

National Games | ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ನ್ಯಾಷನಲ್ ಗೇಮ್ಸ್‌ನಿಂದ ವಿನಾಯಿತಿ

national games

ನವ ದೆಹಲಿ : ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದರೂ ನ್ಯಾಷನಲ್‌ ಗೇಮ್ಸ್‌ನಲ್ಲಿ (National Games) ಪಾಲ್ಗೊಳ್ಳಲೇಬೇಕು ಎಂಬುದಾಗಿ ಭಾರತೀಯ ಒಲಿಂಪಿಕ್‌ ಸಂಸ್ಥೆ ಪರ್ಮಾನು ಹೊರಡಿಸಿರುವ ಹೊರತಾಗಿಯು ಮುಂಬರುವ ೩೬ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ, ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಪಾಲ್ಗೊಳ್ಳುವುದಿಲ್ಲ. ಮುಂದಿನ ವರ್ಷದ ಏಷ್ಯನ್‌ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ ಅನ್ನು ಗುರಿಯಾಗಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲಾಗಿದೆ. ನ್ಯಾಷನಲ್‌ ಗೇಮ್ಸ್‌ ಗುಜರಾತ್‌ನ ಆರು ನಗರಗಳಲ್ಲಿ ಸೆಪ್ಟೆಂಬರ್‌ ೨೯ರಿಂದ ಅಕ್ಟೋಬರ್‌ ೧೨ರವರೆಗೆ ನಡೆಯಲಿದೆ.

ನೀರಜ್‌ ಕಳೆದ ಗುರುವಾರ ನಡೆದ ಡೈಮಂಡ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿದ್ದರಲ್ಲದೆ, ಅದಕ್ಕಿಂತ ಹಿಂದೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಸತತ ಸ್ಪರ್ಧೆಗಳಿಂದ ಬಳಲಿರುವ ಅವರಿಗೆ ವಿಶ್ರಾಂತಿ ನೀಡಬೇಕು ಎಂಬುದು ಅವರ ವೈದ್ಯಕೀಯ ತಂಡದ ಸಲಹೆ. ಹೀಗಾಗಿ ಮುಂದಿನ ವರ್ಷದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೊದಲು ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ.

“ಈ ವರ್ಷದ ಆರಂಭದಲ್ಲಿ ಹಾಕಿರುವ ಯೋಜನೆಯ ಪ್ರಕಾರ ಈ ಅವಧಿಯಲ್ಲಿ ನನ್ನ ಸ್ಪರ್ಧೆಗಳು ಮುಕ್ತಾಯಗೊಳ್ಳಬೇಕಾಗಿತ್ತು. ಏಷ್ಯನ್‌ ಗೇಮ್ಸ್‌ ನನ್ನ ಕೊನೇ ಸ್ಪರ್ಧೆಯಾಗಿತ್ತು. ಆದರೆ, ಅದು ಮುಂದಿನ ವರ್ಷಕ್ಕೆ ಮಂದೂಡಿಕೆಯಾಗಿದೆ. ಅಂತೆಯೇ ನ್ಯಾಷನಲ್‌ ಗೇಮ್ಸ್‌ಗೆ ಕೆಲವು ದಿನಗಳ ಹಿಂದೆಯಷ್ಟೇ ದಿನಾಂಕ ಪ್ರಕಟಗೊಂಡಿದೆ. ಜ್ಯೂರಿಚ್‌ ಡೈಮಂಡ್‌ ಲೀಗ್‌ ಸೇರಿದಂತೆ ಸತತವಾಗಿ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿ ನನ್ನ ಕೋಚ್‌ ಡಾ. ಕ್ಲಾಸ್ ಬಾರ್ಟೊನಿಟ್ಜ್‌ ಅವರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ನ್ಯಾಷನಲ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ,” ಎಂದು ನೀರಜ್‌ ಹೇಳಿದ್ದಾರೆ.

“ನಾನು ಗಾಯದ ಸಮಸ್ಯೆಯಿಂದ ಸುಧಾರಿಸಿಕೊಂಡಿದ್ದೇನೆ. ಮತ್ತೆ ತರಬೇತಿ ಪಡೆದುಕೊಂಡು ಸ್ಪರ್ಧೆಗೆ ಇಳಿಯುವುದು ಅಪಾಯಕಾರಿ. ನನ್ನ ಗೆಳೆಯರು ಹಾಗೂ ಬಂಧುಗಳು ಭಾರತದಿಂದ ಜ್ಯೂರಿಚ್‌ಗೆ ಬಂದಿದ್ದಾರೆ. ಅವರ ಜತೆ ಎರಡು ವಾರಗಳ ಕಾಲ ಇಲ್ಲೇ ಕಳೆಯುವೆ. ಬಳಿಕ ತವರಿಗೆ ಮರಳಿ ಪುನಶ್ವೇತನಕ್ಕೆ ಒಳಗಾಗುತ್ತೇನೆ,” ಎಂದು ನೀರಜ್‌ ಹೇಳಿದ್ದಾರೆ.

ಇದನ್ನೂ ಓದಿ | Diamond League | ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

Exit mobile version