ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್(Rishabh Pant) ಅವರ ಆರೋಗ್ಯದ ಬಗ್ಗೆ ದೊಡ್ಡ ಅಪ್‌ಡೇಟ್(rishabh pant health update) ಹೊರಬಿದ್ದಿದೆ.
ಇನ್ಸೈಡ್ಸ್ಪೋರ್ಟ್ಸ್(InsideSport) ವರದಿ ಪ್ರಕಾರ ರಿಷಭ್ ಪಂತ್ ಕೋಕಿಲಾಬೆನ್ ಆಸ್ಪತ್ರೆಯಿಂದ ಈ ವಾರ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ರಿಷಭ್ ಪಂತ್ ಚೇತರಿಸಿಕೊಂಡಿರುವ ಬಗ್ಗೆ ಇನ್ಸೈಡ್ಸ್ಪೋರ್ಟ್ಸ್ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿ ಮಾಡಿದೆ.
“ರಿಷಭ್ ಪಂತ್ ಅವರಿಗೆ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಚಿಕಿತ್ಸೆಯಿಂದ ಅವರು ಬಹುತೇಕ ಗುಣಮುಖರಾಗಿದ್ದಾರೆ. ಆದ್ದರಿಂದ ಅವರು ಈ ವಾರ ಡಿಸ್ಚಾರ್ಜ್ ಆಗಲಿದ್ದಾರೆ.” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸದ್ಯದಲ್ಲೇ ಮತ್ತೊಂದು ಶಸ್ತ್ರಚಿಕಿತ್ಸೆ
ಪಂತ್ ಸಂಪೂರ್ಣ ಫಿಟ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ. ಅಪಘಾತದಲ್ಲಿ ಪಂತ್ ಅವರ ಬಲ ಮೊಣಕಾಲಿನ ಎಲ್ಲ ಮೂರು ಅಸ್ಥಿರಜ್ಜುಗಳು ಮುರಿದುಹೋಗಿವೆ. ಆದ್ದರಿಂದ ಶಸ್ತ್ರಚಿಕಿತ್ಸೆಯನ್ನು ಇನ್ನೂ ಮಾಡಬೇಕಾಗಿದೆ. ಸುಮಾರು ಒಂದು ತಿಂಗಳಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಎರಡನೇ ಶಸ್ತ್ರಚಿಕಿತ್ಸೆ ಯಾವಾಗ ನಡೆಯಲಿದೆ ಎಂದು ವೈದ್ಯರು ನಿರ್ಧರಿಸುತ್ತಾರೆ ಎಂದು ಬಿಸಿಸಿಐ ಅಧಿಕಾರಿ ಹೇಳಿರುವುದಾಗಿ ಇನ್ಸೈಡ್ಸ್ಪೋರ್ಟ್ಸ್ ವರದಿ ಮಾಡಿದೆ.