ಗುವಾಹಟಿ : ಪ್ರವಾಸಿ ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವೆ (INDvsSL) ಮಂಗಳವಾರ (ಜನವರಿ10) ಏಕ ದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಅಸ್ಸಾಂನ ಗುವಾಹಟಿಯ ಬರ್ಸಾಪಾರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಹಣಾಹಣಿ ಆಯೋಜನೆಗೊಂಡಿದೆ. ಈ ಪಂದ್ಯದ ರೋಚಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಲ್ಲಿನ ಕಾಮ್ರೂಪ್ ಜಿಲ್ಲೆಯ ವ್ಯಾಪ್ತಿಯಲ್ಲಿ ಸರಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಸರಕಾರಿ ಕಚೇರಿ ಉದ್ಯೋಗಿಗಳು ಹಾಗೂ ಶಾಲಾ ಮಕ್ಕಳಿಗೆ ಪಂದ್ಯ ವೀಕ್ಷಣೆ ಮಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ ಎಂದು ಅಲ್ಲಿನ ಸರಕಾರ ಹೇಳಿದೆ.
ಈಶಾನ್ಯ ರಾಜ್ಯಗಳಲ್ಲಿ ಕ್ರಿಕೆಟ್ಗೆ ಜನಪ್ರಿಯತೆ ಒದಗಿಸಲು ಬಿಸಿಸಿಐ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ವೇಳೆ ಅಲ್ಲಿನ ಸರಕಾರವೂ ಕ್ರಿಕೆಟ್ನ ರೋಮಾಂಚನವನ್ನು ಜನರು ಕಳೆದುಕೊಳ್ಳದಂತೆ ಮಾಡಲು ರಜೆ ಘೋಷಿಸಿದೆ. ಹೀಗಾಗಿ ಬರ್ಸಾಪಾರಾ ಸ್ಟೇಡಿಯಮ್ ಇರುವ ಕಾಮ್ರೂಪ್ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಣೆ ಮಾಡಲಾಗಿದೆ.
ಅಸ್ಸಾಮ್ನಲ್ಲಿ 2018ರಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು. ಕಳೆದ ವರ್ಷ ಇಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವೆ ಟಿ20 ಸರಣಿ ಆಯೋಜನೆಗೊಂಡಿತ್ತು. ಒಂದೇ ವರ್ಷದಲ್ಲಿ ಮತ್ತೊಂದು ಪಂದ್ಯ ನೋಡುವ ಅವಕಾಶ ಅಲ್ಲಿನ ಅಭಿಮಾನಿಗಳಿಗೆ ಸಿಕ್ಕಿದೆ.
ಏಕ ದಿನ ಪಂದ್ಯದ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ದೊಡ್ಡ ದೊಡ್ಡ ಕಟೌಟ್ಗಳು ನಗರದಾದ್ಯಂತ ರಾರಾಜಿಸುತ್ತಿವೆ.
ಇದನ್ನೂ ಓದಿ | Jasprit Bumrah | ಜಸ್ಪ್ರಿತ್ ಬುಮ್ರಾ ಮತ್ತೆ ಟೀಮ್ ಇಂಡಿಯಾದಿಂದ ಔಟ್; ಗುವಾಹಟಿಗೆ ಪ್ರಯಾಣಿಸದ ವೇಗಿ