Site icon Vistara News

GPBL 2023: ಹೈಕೋರ್ಟ್ ರಿಲೀಫ್‌; ಗ್ರ್ಯಾನ್‌ ಪ್ರಿ ಲೀಗ್‌ ಆಡಲು ಸಜ್ಜಾದ ಸ್ಟಾರ್ ಶಟ್ಲರ್​ಗಳು​

GPBL 2023 logo

ಬೆಂಗಳೂರು: ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌(GPBL 2023)ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದ ಭಾರತೀಯ ಶಟ್ಲರ್​ಗಳಿಗೆ​ ಜಯ ದೊರೆತಿದೆ. 2ನೇ ಆವೃತ್ತಿಯ ಟೂರ್ನಿಯಲ್ಲಿ ಸ್ಪರ್ಧಿಸಲು ಕರ್ನಾಟಕ ಹೈಕೋರ್ಟ್‌(Karnataka High Court) ಒಪ್ಪಿಗೆ ನೀಡಿದೆ. ಇದಲ್ಲದೆ ಶಟ್ಲರ್‌ಗಳಿಗೆ ಟೂರ್ನಿಯಿಂದ ದೂರವಿರುವಂತೆ ಹೇಳಿದ್ದ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ(BAI) ನೀಡಿದ್ದ ಸೂಚನೆಗೆ ತಡೆ ನೀಡಿದೆ.

2ನೇ ಆವೃತ್ತಿಯ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು, ಕೋಚ್‌, ಸಹಾಯಕ ಸಿಬ್ಬಂದಿ ಮೇಲೆ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯವು ನಿದೇರ್ಶನ ನೀಡಿದೆ. ಮಾನ್ಯತೆ ಇಲ್ಲದ ಖಾಸಗಿ ಲೀಗ್‌ನಲ್ಲಿ ಆಡದಂತೆ ಬಿಎಐ ಆಟಗಾರರಿಗೆ ಸೂಚಿಸಿತ್ತು. ಆಯೋಜಕರು ಇದರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್‌ ತೀರ್ಪಿನಿಂದ ಆಯೋಜಕರು ನಿರಾಳರಾಗಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಗೆ(Badminton Association of India) ಹಿನ್ನಡೆಯಾಗಿದೆ.

ಮೊದಲ ಆವೃತ್ತಿಯಲ್ಲಿ ಕೇವಲ ಕರ್ನಾಟಕ ಶಟ್ಲರ್‌ಗಳಷ್ಟೇ ಪಾಲ್ಗೊಂಡಿದ್ದರು. ಆದರೆ ಈ ಬಾರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಟಗಾರರಿಗೂ ಅವಕಾಶ ನೀಡಲಾಗಿದ್ದು, 56 ಅಂತರಾಷ್ಟ್ರೀಯ ಆಟಗಾರರು ಸೇರಿ ಒಟ್ಟು 500ಕ್ಕೂ ಹೆಚ್ಚು ಶಟ್ಲರ್‌ಗಳು ಹರಾಜಿಗೆ ನೋಂದಣಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಐಎ ಸೂಚನೆ ಬಳಿಕ ಹರಾಜಿನಲ್ಲಿ ಪಾಲ್ಗೊಳ್ಳಲು ಹಿಂಜರಿದಿದ್ದ ಬಿ.ಸಾಯಿಪ್ರಣೀತ್‌, ಮಿಥುನ್ ಮಂಜುನಾಥ್‌, ಪ್ರಿಯಾನ್ಶು ರಾಜಾವತ್‌, ಸೇರಿ ಹಲವರು ವಿವಿಧ ಟೂರ್ನಿಯಲ್ಲಿ ಆಡಲು ಆಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. 2ನೇ ಆವೃತ್ತಿಯಲ್ಲಿ 10 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸದ್ಯದಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ Guinness world record : ಎಫ್​1 ಕಾರಿಗಿಂತಲೂ ವೇಗದ ಸ್ಮ್ಯಾಶ್​ ಹೊಡೆದ ಭಾರತದ ಬ್ಯಾಡ್ಮಿಂಟನ್​ ತಾರೆ​!

ಮತ್ತೊಂದು ಪ್ರಶಸ್ತಿ ನಿರೀಕ್ಷೆಯಲ್ಲಿ ಸಾತ್ವಿಕ್​-ಚಿರಾಗ್​ ಜೋಡಿ

ಟೋಕಿಯೋ: ಭಾನುವಾರವಷ್ಟೇ ವಿಶ್ವದ ನಂ.1 ಜೋಡಿಯನ್ನು ಮಣಿಸಿ ಕೊರಿಯಾ ಓಪನ್‌ ಡಬಲ್ಸ್‌ ಪ್ರಶಸ್ತಿ ಗೆದ್ದ ಚಿರಾಗ್‌ ಶೆಟ್ಟಿ(chirag shetty)-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(satwiksairaj rankireddy) ಜೋಡಿ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಮಂಗಳವಾರ ಆರಂಭಗೊಂಡ ಜಪಾನ್‌ ಓಪನ್‌ ಸೂಪರ್‌-750(japan open 2023) ಕಣಕ್ಕಿಳಿಯಲು ಈ ಜೋಡಿ ಸಜ್ಜಾಗಿದೆ. ವರ್ಷದ ಮೂರು ಬಿಡಬ್ಲ್ಯುಎಫ್​ ಪ್ರಶಸ್ತಿ ಗೆದ್ದು ಬೀಗಿದ ಈ ಜೋಡಿ ಮೇಲೆ ಭಾರತ ಮತ್ತೊಂದು ಪದಕ ಬರವಸೆ ಇರಿಸಿದೆ. 3ನೇ ಶ್ರೇಯಾಂಕದ ಭಾರತೀಯ ಜೋಡಿ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೊ- ಡೇನಿಯಲ್‌ ಮಾರ್ಟಿನ್‌ ವಿರುದ್ಧ ಆಡಲಿದೆ. ಪಿ.ವಿ. ಸಿಂಧು, ಕೆ. ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್​ ಸೇರಿ ಭಾರತದ ಬಹುತೇಕ ಆಟಗಾರರು ಅದೃಷ್ಟ ಪರೀಕ್ಷೆ ಇಳಿಯಲಿದ್ದಾರೆ.

Exit mobile version