ದುಬೈ : ಏಷ್ಯಾ ಕಪ್‌ನಲ್ಲಿ (Asia Cup) ಶುಕ್ರವಾರ ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಆವೃತ್ತಿಯ ಏಷ್ಯಾ ಕಪ್‌ನ ಗುಂಪು ಹಂತದ ಪಂದ್ಯ ಇದಾಗಿದೆ. ಈ ಹಣಾಹಣಿಯಲ್ಲಿ ಗೆದ್ದ ತಂಡ ಸೂಪರ್-೪ ಹಂತಕ್ಕೆ ತೇರ್ಗಡೆಯಾಗಲಿದ್ದು ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತಕ್ಕೆ ಎದುರಾಗಲಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನವೇ ಬಲಿಷ್ಠ ತಂಡವಾಗಿದ್ದು, ಅದು ಗೆಲ್ಲಲಿದೆ ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೊಂದು ಮುಖಾಮುಖಿ ನಡೆಯಲಿದೆ ಎಂಬುದಾಗಿ ಹೇಳಲಾಗುತ್ತಿದೆ.
ಪಾಕಿಸ್ತಾನ ತಂಡದಲ್ಲಿ ಸ್ಟಾರ್ ಆಟಗಾರರ ಬಳಗವೇ ಇದೆ. ಆದರೆ, ಭಾರತ ವಿರುದ್ಧದ ಪಂದ್ಯದಲ್ಲಿ ಅವರೆಲ್ಲರೂ ಬಹುತೇಕ ವೈಫಲ್ಯ ಅನುಭವಿಸಿದ್ದರು. ರಿಜ್ವಾನ್ (೪೩ ರನ್) ಹಾಗೂ ಇಫ್ತಿಕಾರ್ (೨೮ ರನ್) ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದ್ದು ಬಿಟ್ಟರೆ ಮಿಕ್ಕವರೆಲ್ಲರೂ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು. ಹೀಗಾಗಿ ಭಾರತ ತಂಡಕ್ಕೆ ೧೪೮ ರನ್ ಗುರಿಯೊಡ್ಡಲು ಮಾತ್ರ ಸಾಧ್ಯವಾಗಿತ್ತು. ಭಾರತ ೫ ವಿಕೆಟ್ ನಷ್ಟಕ್ಕೆ ಗುರಿ ಮೀರಿತ್ತು.
ಭಾರತ ವಿರುದ್ಧದ ಪಂದ್ಯದ ವೇಳೆ ನಸೀಮ್ ಶಾ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅವರು ಗುಣಮುಖರಾಗಿರುವ ಖಾತರಿಯಿಲ್ಲ. ಒಂದು ವೇಳೆ ಆಗದಿದ್ದರೆ, ಪ್ರಭಾವಿ ಬೌಲಿಂಗ್ ದಾಳಿ ನಡೆಸಿದ್ದ ಅವರು ಅಲಭ್ಯರಾದರೆ ಆ ತಂಡಕ್ಕೆ ಹಿನ್ನಡೆಯಾಗಲಿದೆ.
ಪೈಪೋಟಿ ನೀಡಲಿದೆ ಹಾಂಕಾಂಗ್
ಹಾಂಕಾಂಗ್ ತಂಡವನ್ನೂ ಅಷ್ಟೊಂದು ಲಘುವಾಗಿ ಪರಿಗಣಿಸುವಂತಿಲ್ಲ. ಭಾರತ ತಂಡಕ್ಕೆ ಭರ್ಜರಿ ಪೈಪೋಟಿ ನೀಡಿತ್ತು. ಬಾಬರ್ ಹಯಾತ್ ಹಾಗೂ ಭಾರತ ಮೂಲದ ಕಿಂಚಿತ್ ಶಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಂಕಾಂಗ್ ತಂಡದ ಬೌಲಿಂಗ್ ವಿಭಾಗ ಗಟ್ಟಿಯಾದರೆ ಗೆಲವು ಪಡೆಯುವುದು ಕಷ್ವವಲ್ಲ.
ಸಂಭಾವ್ಯ ತಂಡಗಳು
ಹಾಂಗ್ ಕಾಂಗ್: ನಿಜಾಕತ್ ಖಾನ್ (ನಾಯಕ), ಕಿಂಚಿತ್ ಶಾ (ಉಪನಾಯಕ) ಯಾಸೀಂ ಮುರ್ತಾಜಾ, ಬಾಬರ್ ಹಯಾತ್, ಎಜಾಜ್ ಖಾನ್, ಜೀಶಾನ್ ಅಲಿ, ಸ್ಕಾಟ್ ಮೆಕೆಚ್ನಿ, ಹರೂನ್ ಅರ್ಶದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ.
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶದಬ್ ಖಾನ್, ಅಸಿಫ್ ಅಲಿ, ಮೊಹಮ್ಮದ್ ನವಾಜ್, ನಸೀಂ ಶಾ/ಮೊಹಮ್ಮದ್ ಹಸ್ನೇನ್, ಹ್ಯಾರಿಸ್ ರವೂಫ್, ಶಹನವಾಜ್ ದಹಾನಿ.
ಪಂದ್ಯ ವಿವರ
ಸಮಯ: ರಾತ್ರಿ ೭.೩೦ರಿಂದ
ತಾಣ : ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್
ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್