ಅಹಮದಾಬಾದ್: 17ನೇ ಆವೃತ್ತಿಯ ಐಪಿಎಲ್ನ(IPL 2024) 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(GT vs MI) ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಕಣಕ್ಕಿಳಿಯಲಿದೆ. ಗುಜರಾತ್(Gujarat Titans) ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈ(Mumbai Indians) ತಂಡದ ನಾಯಕನಾಗಿದ್ದಾರೆ. ತಮ್ಮ ಮಾಜಿ ತಂಡದ ವಿರುದ್ಧವೇ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸುತ್ತಿರುವುದ ಈ ಪಂದ್ಯದ ವಿಶೇಷತೆಯಾಗಿದೆ.
ಶುಭಮನ್ ಗಿಲ್ ಸಾರಥ್ಯದ ಗುಜರಾತ್ ತಂಡ ಮುಂಬೈಗೆ ಹೋಲಿಸಿದರೆ ಅಷ್ಟು ಬಲಿಷ್ಠವಾಗಿಲ್ಲ. ತಂಡದ ಸ್ಟಾರ್ ವೇಗಿ ಮೊಹಮದ್ ಶಮಿ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ಉಂಟಾದ ದೊಡ್ಡ ನಷ್ಟ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಕೂಡ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಸದ್ಯಕ್ಕೆ ಡೇವಿಡ್ ಮಿಲ್ಲರ್, ಕೇನ್ ವಿಲಿಯಮ್ಸನ್, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಪ್ರದರ್ಶನದ ಮೇಲೆ ತಂಡದ ಭವಿಷ್ಯ ಅಡಗಿದೆ.
Hugs Galore in MI vs GT Camp. pic.twitter.com/O5iiRCNmUe
— CricketGully (@thecricketgully) March 22, 2024
ಮುಂಬೈ ಸಮರ್ಥ ತಂಡ
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಫಿಟ್ ಆಗದ ಕಾರಣ ಸೂರ್ಯಕುಮಾರ್ ಯಾದವ್ ತಂಡ ಸೇರಲು ತಡವಾದರೂ ಕೂಡ ಮುಂಬೈಗೆ ಹಿನ್ನಡೆಯಾಗದು. ಏಕೆಂದರೆ ಅವರ ಸ್ಥಾನ ತುಂಬಬಲ್ಲ ಹಲವು ಡೇಂಜರಸ್ ಬ್ಯಾಟರ್ಗಳು ಈ ತಂಡದಲ್ಲಿದ್ದಾರೆ. ನಾಯಕತ್ವದ ಹೊರೆಯಿಂದ ಮುಕ್ತರಾಗಿರುವ ರೋಹಿತ್ ಶರ್ಮ ಈ ಬಾರಿ ಪ್ರಚಂಡ ಬ್ಯಾಟಿಂಗ್ ನಡೆಸುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಟಿಮ್ ಡೇವಿಡ್, ಪಾಂಡ್ಯ ಹೀಗೆ ಆಟಗಾರರ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಇದನ್ನೂ ಓದಿ IPL 2024 : ಸಂಜು ಬಳಗದ ಸವಾಲು ಮೀರುವುದೇ ರಾಹುಲ್ ಪಡೆ?
ಮುಖಾಮುಖಿ
ಉಭಯ ತಂಡಗಳು ಇದುವರೆಗೆ ಐಪಿಎಲ್ ಟೂರ್ನಿಯಲ್ಲಿ 4 ಬಾರಿ ಮುಖಾಮುಖಿಯಾಗಿವೆ. ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್ ತಂಡ ಒಟ್ಟು 10 ಪಂದ್ಯಗಳನ್ನು ಆಡಿ 6ರಲ್ಲಿ ಗೆದ್ದಿದೆ. ಮುಂಬೈ ಇಂಡಿಯನ್ಸ್ 4 ಪಂದ್ಯ ಆಡಿ ಕೇವಲ ಒಂದು ಗೆಲುವು ಮಾತ್ರ ದಾಖಲಿಸಿದೆ. ಒಟ್ಟಾರೆ ಇಲ್ಲಿ 28 ಐಪಿಎಲ್ ಪಂದ್ಯಗಳು ನಡೆದಿದೆ. ಈ ಪೈಕಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ 13 ಬಾರಿ, ಚೇಸಿಂಗ್ ನಡೆಸಿದ ತಂಡ 15 ಬಾರಿ ಗೆಲುವು ಸಾಧಿಸಿದೆ.
ಸಂಭಾವ್ಯ ತಂಡಗಳು
ಗುಜರಾತ್: ಶುಭಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಬಿ ಸಾಯಿ ಸುದರ್ಶನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ , ಜೆರಾಲ್ಡ್ ಕೋಟ್ಜಿ, ದಿಲ್ಶನ್ ಮಧುಶಂಕ.