Site icon Vistara News

GT vs SRH: ಇಂದು ಲ್ಯಾವೆಂಡರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಗುಜರಾತ್​ ತಂಡ; ಇದರ ಉದ್ದೇಶವೇನು?

GT vs SRH

ಹೈದರಾಬಾದ್​: ಇಂದು ನಡೆಯುವ ಸನ್​ರೈಸರ್ಸ್​ ಹೈದರಾಬಾದ್(GT vs SRH)​ ವಿರುದ್ಧದ ಪಂದ್ಯದಲ್ಲಿ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್(Gujarat Titans)​ ತಂಡ ಕ್ಯಾನ್ಸರ್ ಜಾಗೃತಿಗಾಗಿ ಲ್ಯಾವೆಂಡರ್ ಜೆರ್ಸಿ(gujarat titans lavender jersey) ಧರಿಸಿ ಕಣಕ್ಕಿಳಿಯಲಿದೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿಯೇ ಗುಜರಾತ್​ ಈ ಜೆರ್ಸಿಯಲ್ಲಿ ಆಡಬೇಕಿತ್ತು. ಆದರೆ ಈ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಇದು ಸಾಧ್ಯವಾಗಿರಲಿಲ್ಲ. ಕಳೆದ ವರ್ಷವೂ ಕೂಡ ಗುಜರಾತ್​ ಈ ಜೆರ್ಸಿಯಲ್ಲಿ ಆಡಿತ್ತು. ಕ್ಯಾನ್ಸರ್ ರೋಗಿಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಮತ್ತು ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

“ಲ್ಯಾವೆಂಡರ್ ಜರ್ಸಿಗಳನ್ನು ಧರಿಸುವುದರಿಂದ ಕ್ಯಾನ್ಸರ್ ಹೋರಾಟಗಾರರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ ಮತ್ತು ಅವರ ಧೈರ್ಯವನ್ನು ಗೌರವಿಸುತ್ತದೆ. ತಮ್ಮ ಈ ಅಭಿಯಾನದಿಂದ ಪ್ರತಿಯೊಬ್ಬರಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಗುಜರಾತ್​ ಫ್ರಾಂಚೈಸಿ ತಿಳಿಸಿದೆ.

2040ರ ವೇಳೆಗೆ ಭಾರತದಲ್ಲಿನ ಕ್ಯಾನ್ಸರ್‌ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ನೋಯ್ಡಾದ ರಾಷ್ಟ್ರೀಯ ಕ್ಯಾನ್ಸರ್‌ ತಡೆ ಮತ್ತು ಸಂಶೋಧನ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ 2.25 ದಶಲಕ್ಷ ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು 2040ರ ವೇಳೆಗೆ ಇದು ದ್ವಿಗುಣಗೊಳ್ಳಲಿದೆ ಎಂದಿದೆ. ಪ್ರತೀ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆೆ ಎಂದು ಕ್ಯಾನ್ಸರ್‌ ಇಂಡಿಯಾ.ಆರ್ಗ್‌ ವರದಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ. 30-50ರಷ್ಟು ಕ್ಯಾನ್ಸರ್‌ ರೋಗಗಳನ್ನು ತಡೆಯಬಹುದಾಗಿದೆ. ಇದ ಕ್ಕಾಗಿ ತಂಬಾಕು ಮತ್ತು ಯುವಿ ಕಿರಣಗಳಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಒಂದು ಸಿಗರೇಟ್‌ನಲ್ಲಿ ಸುಮಾರು 7,000 ರಾಸಾಯನಿಕಗಳಿವೆ ಎನ್ನಲಾಗುತ್ತಿದ್ದು, ಅವುಗಳಲ್ಲಿ 50 ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದೂ ಅದು ಹೇಳಿದೆ.

ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಗುಜರಾತ್​ ತಂಡದ ಪ್ಲೇ ಆಫ್ ಗೇರುವ ಆಸೆ ಕಮರಿ ಹೋಗಿತ್ತು. ಟೂರ್ನಿಯಿಂದ ಹೊರಬಿದ್ದಿರುವ ಗಿಲ್​ ಪಡೆಗೆ ಇಂದಿನ ಪಂದ್ಯ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಮೊದಲೆರಡು ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್‌ ಟೈಟಾನ್ಸ್‌ ಈ ಬಾರಿ ತೀರಾ ನಿರಾಶಾದಾಯಕ ಪ್ರದರ್ಶನ ತೋರಿದೆ. ಮೊಹಮ್ಮದ್‌ ಶಮಿ ಗೈರು ಮತ್ತು ಪಾಂಡ್ಯ ಮುಂಬೈ ತಂಡಕ್ಕೆ ಹೋದದ್ದು ತಂಡಕ್ಕೆ ಭಾರೀ ಹೊಡೆತ ನೀಡಿತ್ತು.​

ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ಗೆ ಇದು ಮಹತ್ವದ ಪಂದ್ಯ. ಸದ್ಯ 14 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿದ್ದರೂ ಪ್ಲೇ ಆಫ್​ ಟಿಕೆಟ್​ ಇನ್ನೂ ಅಧಿಕೃತಗೊಂಡಿಲ್ಲ. ಇಂದು ಗೆದ್ದರೆ ಅಧಿಕೃತವಾಗಲಿದೆ. 25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

Exit mobile version