ಭುವನೇಶ್ವರ: ಪ್ರತಿಷ್ಠಿತ ವಿಶ್ವ ಕಪ್ ಹಾಕಿ 2023ರ ಪಂದ್ಯಾವಳಿಯ ಆತಿಥ್ಯ ವಹಿಸಿದ್ದ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್(Guinness Book Of World Records) ಪ್ರಶಸ್ತಿ ದೊರೆತಿದೆ. ರೂರ್ಕೆಲಾದಲ್ಲಿರುವ ಈ ಸ್ಟೇಡಿಯಂಗೆ ವಿಶ್ವದ ಅತಿದೊಡ್ಡ ಸಂಪೂರ್ಣ ಕುಳಿತುಕೊಳ್ಳುವ ಹಾಕಿ ಕ್ರೀಡಾಂಗಣ ಎಂದು ಗುರುತಿಸುವ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗಿದೆ.
ರೂರ್ಕೆಲಾದಲ್ಲಿ ನಡೆಯುತ್ತಿರುವ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಾವಳಿಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್(naveen patnaik) ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಕ್ರೀಡಾಂಗಣವನ್ನು ದಾಖಲೆಯ 15 ತಿಂಗಳುಗಳಲ್ಲಿ ನಿರ್ಮಿಸಲಾಗಿತ್ತು. 20 ಸಾವಿರ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದೀಗ ವಿಶ್ವದ ಅತಿ ದೊಡ್ಡ ಸಂಪೂರ್ಣ ಕುಳಿತುಕೋಳ್ಳುವ ಹಾಕಿ ಕ್ರೀಡಾಂಗಣ ಎಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.
ಇದನ್ನೂ ಓದಿ Hockey India: ಪುರುಷರ ಹಾಕಿ ತಂಡಕ್ಕೆ ಕ್ರೇಗ್ ಫುಲ್ಟನ್ ನೂತನ ಕೋಚ್
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿಎಂ ನವೀನ್ ಪಟ್ನಾಯಕ್, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಈ ಮನ್ನಣೆಯಿಂದ ನಮ್ಮ ರಾಜ್ಯ ಒಡಿಶಾ ಅಂತಾರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಛಾಪು ಮೂಡಿಸಿದೆ ಎಂಬುದಕ್ಕೆ ಹೆಮ್ಮೆಯಾಗುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಯೋಜನೆಯಲ್ಲಿ ಭಾಗಿಯಾದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದರು.