ಮುಂಬಯಿ : ಐಪಿಎಲ್ ಪ್ರವೇಶದ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಬ್ಯಾಟರ್ ಎನಿಸಿಕೊಂಡಿದ್ದ ಶುಬ್ಮನ್ ಗಿಲ್, ಮುಂದಿನ ಆವೃತ್ತಿಯಲ್ಲಿ ಆ ತಂಡದಲ್ಲಿ ಆಡುವುದಿಲ್ಲವೇ? ಹೀಗೊಂದು ಅನುಮಾನದ ಮಾತುಗಳು ಹರಿದಾಡುತ್ತಿವೆ ಐಪಿಎಲ್ ಅಭಿಮಾನಿಗಳ ವಲಯದಲ್ಲಿ. ಅದಕ್ಕೆ ಕಾರಣವೂ ಇದೆ. ಶುಬ್ಮನ್ ಗಿಲ್ ಅವರಿಗೆ ವಿದಾಯ ನೀಡುವಂಥ ಟ್ವೀಟ್ ಮಾಡಿದೆ.
“ಇದೊಂದು ಸ್ಮರಣೀಯ ಯಾನ. ನಿಮ್ಮ ಮುಂದಿನ ಪಯಣಕ್ಕೆ ಶುಭವಾಗಲಿ,” ಎಂದು ಗುಜರಾತ್ ಟೈಟನ್ಸ್ ತಂಡ ಟ್ವೀಟ್ ಮಾಡಿದೆ. ಅಚ್ಚರಿಯೆಂದರೆ ಶುಬ್ಮನ್ ಗಿಲ್ ಕೂಡ ಇದಕ್ಕೆ ಸ್ವೀಕಾರ ಎಂಬ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಗಿಲ್ ಅವರು ೨೦೨೨ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೨೩ ವರ್ಷದ ಈ ಆಟಗಾರ ೧೬ ಪಂದ್ಯಗಳಲ್ಲಿ ೪೮೩ ರನ್ ಬಾರಿಸಿದ್ದಾರೆ. ಜತೆಗೆ ವೃದ್ಧಿಮಾನ್ ಸಾಹಾ ಅವರ ಜತೆ ಉತ್ತಮ ಆರಂಭಿಕ ಜತೆಯಾಟ ಆಡಿದ್ದರು.
ಅದಕ್ಕಿಂತ ಹಿಂದಿನ ಆವೃತ್ತಿಯಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಪರ ಆಡಿದ್ದರು. ಆದಾಗ್ಯೂ ಅವರನ್ನು ೨೦೨೨ನೇ ಆವೃತ್ತಿಗೆ ಫ್ರಾಂಚೈಸಿ ಕೈ ಬಿಟ್ಟಿತ್ತು. ಬಳಿಕ ಗುಜರಾತ್ ಟೈಟನ್ಸ್ ತಂಡದ ಪರ ಆಡ ಚಾಂಪಿಯನ್ ಪಟ್ಟ ಗಳಿಸಿದ್ದರು. ಇದೀಗ ಅಲ್ಲಿಂದಲೂ ಬೇರೆ ತಂಡಕ್ಕೆ ಹೋಗುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Cricket League | ಯುಎಇ ಮತ್ತು ದಕ್ಷಿಣ ಆಫ್ರಿಕಾದ ಲೀಗ್‌ಗಳಲ್ಲಿ ತಂಡ ಖರೀದಿಸಿದ ಮುಂಬಯಿ ಇಂಡಿಯನ್ಸ್