ನವದೆಹಲಿ: 17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಡಿ(D Gukesh) ಅವರು ಫಿಡೆ ವಿಶ್ವ ಶ್ರೇಯಾಂಕದಲ್ಲಿ ಭಾರತದ ನಂಬರ್ ಒನ್ ಚೆಸ್ ಆಟಗಾರನಾಗಿ ಮೂಡಿಬಂದಿದ್ದಾರೆ. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್(GM Viswanathan Anand) ಅವರ ಸರ್ವಕಾಲಿಕ 37 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ಗುಕೇಶ್ 8ನೇ ಸ್ಥಾನ ಪಡೆದಿದ್ದಾರೆ.
ಜುಲೈ 1986ರಿಂದ ಆನಂದ್ ಅವರು ಭಾರತದ ನಂ.1 ಚೆಸ್ ಆಟಗಾರರಾಗಿ ಇದುವರೆಗೆ ಮೆರೆದಿದ್ದರು. ಆದರೆ ಇದೀಗ ನೂತನ ಸಾಮ್ರಾಟನ ಎಂಟ್ರಿಯಾಗಿದೆ. ಫಿಡೆ(FIDE) ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಗುಕೇಶ್(2758) ರೇಟಿಂಗ್ ಅಂಕ) 8ನೇ ಸ್ಥಾನ ಪಡೆಯುವ ಮೂಲಕ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ವಿಶ್ವನಾಥನ್ ಆನಂದ್(2754) 9ನೇ ಶ್ರೇಯಾಂಕದಲ್ಲಿದ್ದಾರೆ. ಕೇವಲ ನಾಲ್ಕು ರೇಟಿಂಗ್ ಅಂಕದಲ್ಲಿ ಆನಂದ್ ಅವರನ್ನು ಗುಕೇಶ್ ಹಿಂದಿಕ್ಕಿದ್ದಾರೆ.
ಇದನ್ನೂ ಓದಿ Praggnanandhaa: ಹೆತ್ತವರ ಜತೆ ಮೋದಿ ಭೇಟಿಯಾದ ಪ್ರಜ್ಞಾನಂದ; ಚೆಸ್ ಬೋರ್ಡ್ ಮುಂದೆಯೇ ಉಭಯ ಕುಶಲೋಪರಿ
ವಿಶ್ವನಾಥನ್ ಆನಂದ್ ಕೂಡ ಗುಕೇಶ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಚೆಸ್ ಇನ್ನೂ ಕೂಡ ಜೀವಂತವಾಗಿದೆ ಎನ್ನುವುದಕ್ಕೆ ಇದುವೇ ಉತ್ತಮ ಸಾಕ್ಷಿ ಎಂದು ಹೇಳುವ ಮೂಲಕ ಗುಕೇಶ್ ಸಾಧನೆಯನ್ನು ಕೊಂಡಾಡಿದ್ದಾರೆ.
ಕಾರ್ಲ್‌ಸನ್ ವಿರುದ್ಧ ಗೆಲುವು ಕಂಡಿದ್ದ ಗುಕೇಶ್
ಕಳೆದ ವರ್ಷವಷ್ಟೇ ವಿಶ್ವದ ನಂಬರ್ ಒನ್ ಚೆಸ್ ಪ್ಲೇಯರ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಗುಕೇಶ್ ಸೋಲಿಸಿ ಭಾರಿ ಸುದ್ದಿಯಾಗಿದ್ದರು. ಆನ್‌ಲೈನ್ ಚೆಸ್ ಸ್ಪರ್ಧೆಯಲ್ಲಿ ಕಾರ್ಲ್‌ಸೆನ್ ಅವರನ್ನು ಸೋಲಿಸಿ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರನಾಗಿ, ವಿಶ್ವ ಚಾಂಪಿಯನ್ ಅವರನ್ನು ಮಣಿಸಿದ ಆಟಗಾರ ಎನಿಸಿಕೊಂಡಿದ್ದರು. ಸ್ಪರ್ಧೆಯ ಒಂಬತ್ತನೇ ಸುತ್ತಿನಲ್ಲಿ, ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಊಹಿಸಲು ಅಸಾಧ್ಯವೆಂಬಂತೆ ಭಾರತದ ಈ ಸಣ್ಣ ಪೋರ ಅಂದು ನೀರು ಕುಡಿಸಿದ್ದರು.
ಪ್ರಜ್ಞಾನಂದಗೆ ಮೂರನೇ ಸ್ಥಾನ
2023ರ ಫಿಡೆ ಚೆಸ್ ವಿಶ್ವಕಪ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆದ ಆರ್. ಪ್ರಜ್ಞಾನಂದ(Praggnanandhaa) ವಿಶ್ವ ಶ್ರೇಯಾಂಕದಲ್ಲಿ 19ನೇ ಸ್ಥಾನ ಪಡೆದಿದ್ದಾರೆ. ಭಾರತದ ಶ್ರೇಯಾಂಕ ಪಟ್ಟಿಯಲ್ಲಿ ಪ್ರಜ್ಞಾನಂದ ಮೂರನೇ ಸ್ಥಾನ ಪಡೆದಿದ್ದಾರೆ. ಇವರ ವಿರುದ್ಧ ಗೆದ್ದ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.