ನವ ದೆಹಲಿ : ಅನಿಲ್ ಕುಂಬ್ಳೆ ಭಾರತ ತಂಡದ (Team India) ಕೋಚ್ ಹುದ್ದೆಯಿಂದ ಕೆಳಕ್ಕೆ ಇಳಿದ ಮೇಲೆ ವೀರೇಂದ್ರ ಸೆಹ್ವಾಗ್ ಹೆಡ್ ಕೋಚ್ ಆಗಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ನಾಯಕರಾಗಿದ್ದ ವಿರಾಟ್ ಕೊಹ್ಲಿಯೇ ನೇರವಾಗಿ ಸೆಹ್ವಾಗ್ ಬಳಿ ಕೋಚ್ ಆಗುವಂತೆ ಮನವಿ ಮಾಡಿದ್ದರು ಎಂದೂ ವರದಿಗಳಾಗಿದ್ದವು. ಆದರೆ, ಆ ವೇಳೆ ವೀರೇಂದ್ರ ಸೆಹ್ವಾಗ್ ಅವರು ಯಾವುದೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಭಾರತದ ಮಾಜಿ ಸ್ಫೋಟಕ ಬ್ಯಾಟರ್. ನಾನು ಟೀಮ್ ಇಂಡಿಯಾದ ಕೋಚ್ ಆಗಲು ಬಯಸಿದ್ದು ಕೊಹ್ಲಿಯ ಮನವಿ ಮೇರೆಗೆ ಎಂದು ಹೇಳಿದ್ದಾರೆ.
2016ರಲ್ಲಿ ಅನಿಲ್ ಕುಂಬ್ಳೆ ಭಾರತ ತಂಡಕ್ಕೆ ಹೆಡ್ ಕೋಚ್ ಆಗಿದ್ದರು. ಆ ವೇಳೆ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿತ್ತು. ಆದರೆ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರುವ ಅನಿಲ್ ಕುಂಬ್ಳೆ ಕೋಚಿಂಗ್ ವಿರುದ್ಧ ನಿಂತರು. ಅನಿಲ್ ಕುಂಬ್ಳೆ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಭಾರತ ಸೋಲು ಅನುಭವಿಸಿದ ಬಳಿಕ ಹೆಡ್ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆ ಸೆಹ್ವಾಗ್ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ಅವರು ಕೋಚ್ ಆಗಲಿಲ್ಲ. ಆದರೆ, ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವುದಕ್ಕೆ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಕಾರಣ ಎಂದು ನ್ಯೂಸ್18 ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ನನ್ನನ್ನು ಸಂಪರ್ಕಿಸದಿದ್ದರೆ ನಾನು ಅರ್ಜಿ ಸಲ್ಲಿಸುತ್ತಿರಲಿಲ್ಲ. ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವೆ ಹೊಂದಾಣಿಕೆ ಇಲ್ಲ ಎಂದು ಹೇಳಿದ್ದರು. 2017 ರ ಚಾಂಪಿಯನ್ಸ್ ಟ್ರೋಫಿ ನಂತರ ಕುಂಬ್ಳೆ ಅವರ ಒಪ್ಪಂದವು ಮುಕ್ತಾಯಗೊಳ್ಳುತ್ತದೆ ಮತ್ತು ನಂತರ ನೀವು ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರಯಾಣಿಸಬಹುದು ಎಂದು ಅವರು ನನಗೆ ಹೇಳಿದ್ದರು, ಎಂದು ಸೆಹ್ವಾಗ್ ಬಹಿರಂಗ ಮಾಡಿದ್ದಾರೆ.