Site icon Vistara News

Hanuma vihari: ಮೂಳೆ ಮುರಿದರೂ ಬ್ಯಾಂಡೇಜ್ ಕಟ್ಟಿ ತಂಡದ ರಕ್ಷಣೆಗೆ ನಿಂತ ಹನುಮ ವಿಹಾರಿ; ವಿಡಿಯೊ ವೈರಲ್​

hanuma vihari

#image_title

ಇಂದೋರ್​: ಇಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ(Ranji trophy) 4ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಹನುಮ ವಿಹಾರಿ(Hanuma vihari) ದಿಟ್ಟ ಹೋರಾಟವೊಂದನ್ನು ನಡೆಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಮೂಳೆ ಮುರಿತಕ್ಕೊಳಗಾಗಿದ್ದರೂ ತಂಡಕ್ಕಾಗಿ ಬ್ಯಾಂಡೇಜ್ ಕಟ್ಟಿ ಕಣಕ್ಕಿಳಿದಿದ್ದಾರೆ. ಅವರ ಈ ದಿಟ್ಟ ನಡೆಗೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅಂದಿದ್ದಾರೆ.

ಬುಧವಾರ ನಡೆದ ಮಧ್ಯಪ್ರದೇಶ ವಿರುದ್ಧದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಆಂಧ್ರಪ್ರದೇಶ ದಿಢೀರ್ ಕುಸಿತಕ್ಕೊಳಗಾಯಿತು. ಇದೇ ವೇಳೆ ತಂಡದ ನಾಯಕ ಹನುಮ ವಿಹಾರಿ ಅವರು ಅವೇಶ್ ಖಾನ್ ಎಸೆದ ಬೌನ್ಸರ್​ ಎಸೆತದಿಂದ ಕೈಗೆ ಗಾಯ ಮಾಡಿಕೊಂಡರು. ನೋವಿನಿಂದ ಒದ್ದಾಡಿದ ವಿಹಾರಿ ಮೈದಾನ ತೊರೆದು ಬಳಿಕ ಸ್ಕ್ಯಾನಿಂಗ್​ಗೆ ಒಳಗಾದರು.

​ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಮಣಿಕಟ್ಟಿನ ಮೂಳೆ ಮುರಿತಕ್ಕೊಳಗಾಗಿರುವುದು ಕಂಡು ಬಂದಿದೆ. ಹೀಗಾಗಿ ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಆದರೆ ಇತ್ತ ಆಂಧ್ರ ತಂಡವು ದಿಢೀರ್ ಕುಸಿತಕ್ಕೊಳಗಾಗಿರುವುದನ್ನು ಗಮನಿಸಿದ ವಿಹಾರಿ ಮತ್ತೆ ಪ್ಯಾಡ್ ಕಟ್ಟಿ ಬ್ಯಾಟಿಂಗ್​ಗೆ ಮರಳಿದ್ದಾರೆ. ಬಲಗೈ ಮಣಿಕಟ್ಟು ಮುರಿತಕ್ಕೊಳಗಾಗಿದ್ದ ಕಾರಣ ಎಂದಿನಂತೆ ಬಲಗೈ ಬ್ಯಾಟಿಂಗ್ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಎಡಗೈ ಬ್ಯಾಟಿಂಗ್​ ಶೈಲಿಯಲ್ಲೇ ದಿಟ್ಟತನದಿಂದಲೇ ಬೌಲರ್​ಗಳನ್ನು ಎದುರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

16 ರನ್​ಗಳಿಸಿದ್ದ ವೇಳೆ ಮೈದಾನ ತೊರೆದಿದ್ದ ವಿಹಾರಿ ಆ ಬಳಿಕ ಬಂದು ರಕ್ಷಣಾತ್ಮಕ ಆಟವಾಡಿ ತಂಡವನ್ನು ಪಾರು ಮಾಡಿದರು. ಅದರಲ್ಲೂ ಕೊನೆಯ ವಿಕೆಟ್​ಗೆ​ 26 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಅಂತಿಮವಾಗಿ ಆಂಧ್ರಪ್ರದೇಶ ತಂಡ ಮೊದಲ ಇನಿಂಗ್ಸ್​ 379 ರನ್​ಗೆ ಆಲ್​ಔಟ್​ ಆಯಿತು.

Exit mobile version