ಮುಂಬಯಿ : ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK) ನಡುವೆ ಭಾನುವಾರ ನಡೆದ ಏಷ್ಯಾ ಕಪ್ ಪಂದ್ಯದ ಬಗ್ಗೆ ಟವಿಯೊಂದರ ಜತೆ ಮಾತನಾಡುವಾಗ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಗೌತಮ್ ಗಂಭೀರ್ ಅವರ ಬಗ್ಗೆ ನೀಡಿದ ಹೇಳಿಕೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಇದ್ದ ಹರ್ಭಜನ್ ಸಿಂಗ್ ಅವರು ಅಫ್ರಿದಿ ಕೊಟ್ಟ ಹೇಳಿಕೆಗ ಪ್ರತ್ಯುತ್ತರ ಕೊಡದೇ ನಗಾಡಿದಕ್ಕೂ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.
ಇತ್ತಂಡಗಳ ನಡುವಿನ ಹಣಾಹಣಿ ಬಗ್ಗೆ ಮಾತನಾಡುತ್ತಿದ್ದ ಶಾಹಿದ್ ಅಫ್ರಿದಿ, “ಈಗ ಭಾರತ ತಂಡದಲ್ಲಿ ಗೌತಮ್ ಗಂಭೀರ್ ಅವರಂಥ ಆಟಗಾರರು ಇಲ್ಲ. ನಾನು ಮತ್ತು ಅವರು ಆಡುತ್ತಿದ್ದ ವೇಳೆ ಪರಸ್ಪರ ಜಗಳವಾಡುತ್ತಿದ್ದೆವು. ನಿವೃತ್ತಿ ಪಡೆದುಕೊಂಡ ನಂತರವೂ ಟ್ವೀಟ್ ಮೂಲಕ ಆಗಾಗ ಸಮರ ಸಾರಿದ್ದೇವೆ. ಅವರೊಬ್ಬರು ವಿಭಿನ್ನ ವ್ಯಕ್ತಿತ್ವದ ಕ್ರಿಕೆಟಿಗರಾಗಿದ್ದಾರೆ. ಭಾರತ ತಂಡದವರೂ ಅವರನ್ನು ಇಷ್ಟಪಡಲಾರರು,” ಎಂದು ಹೇಳಿದ್ದಾರೆ. ಈ ಸಂವಾದದಲ್ಲಿ ಜತೆಗಿದ್ದ ಹರ್ಭಜನ್ ಸಿಂಗ್ ಶಾಹಿನ್ ಮಾತಿಗೆ ನಗಾಡಿದ್ದಾರೆ. ಇದು ಗಂಭೀರ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ತಮ್ಮ ಸಹ ಆಟಗಾರರನ್ನು ತೆಗಳುವಾಗಲೂ ಹರ್ಭಜನ್ ಪ್ರತಿಕ್ರಿಯೆ ನೀಡದಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಗೌತಮ್ ಗಂಭೀರ್ ಅವರನ್ನು ಇಡೀ ಭಾರತವೇ ಮೆಚ್ಚುತ್ತಿದೆ. ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರನ್ನು ಯಾರೂ ಇಷ್ಟಪಡದ ಆಟಗಾರ ಎಂದು ಹೇಳಿದ್ದು ಸರಿಯಲ್ಲ ಎಂದು ಶಾಹಿನ್ ಅಫ್ರಿದಿಗೆ ಅಭಿಮಾನಿಗಳು ಪಾಠ ಹೇಳಿದ್ದಾರೆ.
ಗೌತಮ್ ಗಂಭೀರ್ ಅವರು ನಮ್ಮ ಹೀರೊ. ಅವರು ಉತ್ತಮ ಕ್ರಿಕೆಟಿಗ. ಅವರನ್ನು ತೆಗಳುವ ಯಾವುದೇ ಹಕ್ಕು ನಿಮಗಿಲ್ಲ ಎಂದು ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | IND vs PAK | ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆಟಗಾರರ ನಡುವಿನ ಬಿಗ್ ಫೈಟ್‌ಗಳು ಇಲ್ಲಿವೆ