ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್(Harbhajan Singh) ಅವರು ಪಾಕಿಸ್ತಾನದ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇರುತ್ತಾರೆ. ಸುಮ್ಮ ಸುಮ್ಮನೆ ಭಾರತೀಯ ಕ್ರಿಕೆಟ್ ಮತ್ತು ಆಟಗಾರರ ವಿರುದ್ಧ ಆರೋಪ ಮಾಡಿದಾಗ ಪಾಕ್ಗೆ ತಕ್ಕ ತಿರುಗೇಟು ನೀಡುವವರ ಸಾಲಿನಲ್ಲಿ ಹರ್ಭಜನ್ ಮುಂಚೂಣಿಯಲ್ಲಿರುತ್ತಾರೆ. ಇದೀಗ ಧೋನಿ(MS Dhoni) ವಿಚಾರದಲ್ಲಿ ಪಾಕ್ ಪತ್ರಕರ್ತನ(Pakistan Journalist) ಬೆಂಡೆತ್ತಿದ್ದಾರೆ.
ಪಾಕಿಸ್ತಾನ ಪತ್ರಕರ್ತ ಫರೀದ್ ಖಾನ್(Pakistan Journalist Farid Khan) ತನ್ನ ಟ್ವೀಟರ್ ಎಕ್ಸ್ ಖಾತೆಯಲ್ಲಿ ಎಂ.ಎಸ್.ಧೋನಿ ಮತ್ತು ಮೊಹಮ್ಮದ್ ರಿಜ್ವಾನ್(Mohammad Rizwan) ಇಬ್ಬರಲ್ಲಿ ಯಾರು ಬೆಸ್ಟ್? ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ ಎಂದು ಪ್ರಶ್ನೆ ಮಾಡಿದ್ದರು. ಈ ಪೋಸ್ಟ್ ನೋಡಿದ್ದೇ ತಡ ಹರ್ಭಜನ್ ಪಿತ್ತ ನೆತ್ತಿಗೇರಿದ್ದು ಇದೆಂತಾ ಸಿಲ್ಲಿ ಪ್ರಶ್ನೆ ಎಂದು ಪ್ರತಿಕ್ರಿಯಿಸಿದ್ದಾರೆ. “ನೀವು ಇತ್ತೀಚಿನ ದಿನಗಳಲ್ಲಿ ಏನು ಸೇದುತ್ತೀರ? ಇದೆಂತಾ ಸಿಲ್ಲಿ ಪ್ರಶ್ನೆ. ಧೋನಿಯಂತ ದಿಗ್ಗಜ ಆಟಗಾರನೊಂದಿಗೆ ಈಗ ತಾನೆ ಕ್ರಿಕೆಟ್ನಲ್ಲಿ ಬೆಳೆಯುತ್ತಿರುವ ರಿಜ್ವಾನ್ ಅವರನ್ನು ಹೋಲಿಕೆ ಮಾಡುವುದು ಎಷ್ಟು ಸರಿ. ನೀವು ರಿಜ್ವಾನ್‌ಗೆ ಈ ಪ್ರಶ್ನೆ ಕೇಳಿದರೂ ಅವರು ನಿಮಗೆ ಇದೇ ಉತ್ತರ ಕೊಡುತ್ತಾರೆ” ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.
ಇದನ್ನೂ ಓದಿ Yuvraj Singh : ಅಂಗವಿಕಲರಂತೆ ರೀಲ್ಸ್ ಮಾಡಿದ ಯುವರಾಜ್, ಹರ್ಭಜನ್ ಸಿಂಗ್ ವಿರುದ್ಧ ದೂರು ದಾಖಲು
“ನಾನು ರಿಜ್ವಾನ್ ಅವರನ್ನು ಇಲ್ಲಿ ಅವಮಾನ ಮಾಡುತ್ತಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ಯಾವಾಗಲೂ ತುಂಬಾ ಪಾಸಿಟಿವ್ ಆಗಿ ಆಡುತ್ತಾರೆ. ಕ್ರಿಕೆಟ್ನಲ್ಲಿ ಅವರು ಇನ್ನೂ ಉತ್ತಮ ಸಾಧನೆ ಮಾಡುವಂತಾಗಿ. ಆದರೆ, ಧೋನಿ ಜತೆ ಹೋಲಿಕೆ ಮಾಡುವುದು ತಪ್ಪು. ಧೋನಿ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ ಕೂಡ ಈಗಲೂ ಅವರು ವಿಶ್ವ ಕ್ರಿಕೆಟ್ನಲ್ಲಿ ನಂಬರ್ 1 ಕೀಪರ್ ಎನ್ನುವ ಖ್ಯಾತಿ ಹೊಂದಿದ್ದಾರೆ. ಹೀಗಾಗಿ ಮೊದಲು ಈ ಮೂರ್ಖತನದ ಪ್ರಶ್ನೆಯನ್ನು ಕೇಳುವುದು ನಿಲ್ಲಿಸಿ ಎಂದು ಪತ್ರಕರ್ತ ಫರೀದ್ ಖಾನ್ಗೆ ಟರ್ಬನೇಟರ್ ಖ್ಯಾತಿಯ ಭಜ್ಜಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕ್(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿದ್ದ ಕಮ್ರಾನ್ ಅಕ್ಮಲ್(Kamran Akmal)ಗೆ ಹರ್ಭಜನ್ ಸಿಂಗ್(Harbhajan Singh) ನಿನೋಬ್ಬ ನಾಲಾಯಕ್(Nalaayak) ಎಂದು ಹೇಳಿದ್ದರು.
ಎಎನ್ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್ ಸಿಂಗ್ ಅವರು ಕಮ್ರಾನ್ ಅಕ್ಮಲ್ ಒಬ್ಬ ನಾಲಾಯಕ್, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದರು. ನಿಮ್ಮ ಕೊಳಕು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ ಅವರನ್ನು ರಕ್ಷಿಸಿದ್ದೇವೆ. ನಿಮಗೆ ನಾಚಿಕೆಯಾಗಬೇಕು… ಸ್ವಲ್ಪ ಕೃತಜ್ಞತೆ ಇರಲಿ” ಎಂದು ಬರೆದುಕೊಂಡಿದ್ದರು.