Site icon Vistara News

WTC Final 2023 : ವಿಕೆಟ್​ ಕೀಪರ್​ ಆಯ್ಕೆ ಚರ್ಚೆಯಲ್ಲಿ ಯೂಟರ್ನ್​ ಹೊಡೆದ ಮಾಜಿ ಸ್ಪಿನ್ನರ್​ ಹರ್ಭಜನ್​!

KS Bharath

#image_title

ನವ ದೆಹಲಿ: ಜೂನ್ 7ರಿಂದ 11 ರವರೆಗೆ ಲಂಡನ್​​ನ ಓವಲ್​​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (WTC Final 2023) ಫೈನಲ್ ಪಂದ್ಯಕ್ಕೆ ಭಾರತ ತಂಡದ ವಿಕೆಟ್​ಕೀಪರ್​ ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇಶಾನ್​ ಕಿಶನ್​ ಉತ್ತಮವೋ ಅಥವಾ ಕೆ. ಎಸ್​ ಭರತ್​​ ಒಳ್ಳೆಯದೋ ಎಂಬ ಚರ್ಚೆ ನಡೆಯುತ್ತಿದೆ ಭಾರತದ ಟೆಸ್ಟ್​ ತಂಡದ ವಿಚಾರಕ್ಕೆ ಬಂದಾಗ ಇಶಾನ್ ಮತ್ತು ಭರತ್ ಇಬ್ಬರೂ ಅನನುಭವಿಗಳು. ಹೀಗಾಗಿ ಆಯ್ಕೆ ನಿರ್ಧಾರವನ್ನು ಹೆಚ್ಚು ಕಠಿಣಗೊಳಿಸಿದೆ.

ಭಾರತ ತಂಡ ಸದ್ಯ ಲಂಡನ್​ನಲ್ಲಿದ್ದು ಫೈನಲ್ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಏಳರಂದು ಬೆಳಗ್ಗೆ ಆಡುವ 11ರ ಬಳಗ ಗೊತ್ತಾಗಲಿದ್ದು, ಪರಿಸ್ಥಿತಿಗೆ ಪೂರಕವಾಗಿ ವಿಕೆಟ್​ಕೀಪರ್​ ಆಯ್ಕೆ ಮಾಡುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧಾರವಾಗಿದೆ. ಆದರೆ, ಹೊರ ಪ್ರಪಂಚದಲ್ಲಿ ಈ ಬಗ್ಗೆ ಚರ್ಚೆಗಳು ಸತತವಾಗಿ ನಡೆಯುತ್ತಿದೆ. ಕ್ರಿಕೆಟ್ ಪಂಡಿತರಲ್ಲಿ ಕೆಲವರು ಕೆ. ಎಸ್ ಭರತ್​ಗೆ ಅವಕಾಶ ನೀಡಿ ಎಂದರೆ ಇನ್ನು ಕೆಲವರು ಇಶಾನ್​ ಕಿಶನ್​ ಬೆಸ್ಟ್ ಎಂದು ಹೇಳಿದರು. ಈ ಚರ್ಚೆಗೆ ಒಬ್ಬೊಬ್ಬರು ಧ್ವನಿಗೂಡಿಸುತ್ತಿದ್ದಾರೆ.

ಕಾಯಂ ವಿಕೆಟ್​ಕೀಪರ್​ ರಿಷಭ್​ ಪಂತ್​ ಭೀಕರ ಅಪಘಾತಕ್ಕೆ ಒಳಗಾದ ಬಳಿಕ ಗಾಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಕೆ. ಎಲ್​ ಪರ್ಯಾಯ ಆಯ್ಕೆಯಾಗಿದ್ದರೂ ಅವರು ಐಪಿಎಲ್​ ವೇಳೆ ತೊಡೆ ನೋವಿಗೆ ಒಳಗಾಗಿದ್ದರು. ಹೀಗಾಗಿ ಅಯ್ಕೆ ಗೊಂದಲ ಹೆಚ್ಚಾಗಿದೆ.

ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದಲ್ಲಿ ಇಶಾನ್​ ಕಿಶನ್​ಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಶಾನ್​ ಕಿಶನ್​ ರಿಷಭ್ ಪಂತ್​​ಗೆ ನೇರ ಪರ್ಯಾಯ ಎಂದು ಹೇಳಿದ್ದಾರೆ. ಅಚ್ಚರಿಯೆಂದರೆ ಕೆಲವು ದಿನಗಳ ಹಿಂದೆ ಹರ್ಭಜನ್​ ಅವರು ಭರತ್​ ಉತ್ತಮ ಎಂಬ ಹೇಳಿಕೆ ಕೊಟ್ಟಿದ್ದರು. ಇದೀಗ ಯೂಟ್ಯೂಬ್ ಹೊಸ ವಿಡಿಯೊದಲ್ಲಿ ಬದಲಾದ ಹೇಳಿಕೆ ಕೊಟ್ಟಿದ್ದಾರೆ.

ಭರತ್​ಗಿಂತ ಮೊದಲು ಇಶಾನ್ ಕಿಶನ್ ಅವರನ್ನು ಏಕೆ ಪರಿಗಣಿಸಬೇಕು ಎಂದರೆ, ಇಶಾನ್ ಕಿಶನ್ ಹೊಸ ಚೆಂಡನ್ನು ಭರತ್ ಗಿಂತ ಉತ್ತಮವಾಗಿ ನಿಭಾಯಿಸಬಲ್ಲರು. ಇದು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಓಪನರ್ ಕೂಡ ಆಗಿದ್ದಾರೆ ಮತ್ತು ಉತ್ತಮ ಫಾರ್ಮ್​ನಲ್ಲಿದ್ದಾರೆ. ಆದ್ದರಿಂದ 80 ಓವರ್​ಗಳ ಬಳಿಕ ಎರಡನೇ ಹೊಸ ಚೆಂಡನ್ನು ಪರಿಚಯಿಸಿದರೆ ಮತ್ತು ಇಶಾನ್ ಬ್ಯಾಟಿಂಗ್ ಮಾಡಲು ಹೊರಟರೆ ತಂಡಕ್ಕೆ ರನ್​ ಸಿಗಬಹುದು ಎಂದು ಹರ್ಭಜನ್​ ಸಿಂಗ್​ ಹೇಳಿದ್ದಾರೆ.

ಇದನ್ನೂ ಓದಿ : Love Jihad : ಲವ್ ಜಿಹಾದ್; ಕ್ಷಮೆ ಕೋರಿದ ಗುಜರಾತ್​ ತಂಡದ ವೇಗದ ಬೌಲರ್​ ಯಶ್​ ದಯಾಳ್​​!

ರಿಷಭ್ ಪಂತ್ ಸ್ಫೋಟಕ ಬ್ಯಾಟರ್​​. ಇಶಾನ್ ಕೂಡ ಅದೇ ಗುಣಮಟ್ಟವನ್ನು ಹೊಂದಿದ್ದಾರೆ. ವಿಕೆಟ್​​ಗಳ ಹಿಂದೆ ಭರತ್ ಅದ್ಭುತವಾಗಿದ್ದರೂ, ಅವರ ಬ್ಯಾಟಿಂಗ್ ಬಗ್ಗೆ ನನಗೆ ಹೆಚ್ಚು ವಿಶ್ವಾಸವಿಲ್ಲ ಎಂದು ಹರ್ಭಜನ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಹೇಳಿಕೊಂಡಿದ್ದಾರೆ.

ಆದಾಗ್ಯೂ, ಕೆಲವರಿಗೆ ಹರ್ಭಜನ್​ ಕೆಲವು ದಿನಗಳ ಹಿಂದೆ ನೀಡಿದ್ದ ಹೇಳಿಕೆ ನೆನಪಿರಬಹುದು. ಆ ವೇಳೆ ಅವರು ಕೀಪರ್ ಪಾತ್ರಕ್ಕೆ ಕೆಎಸ್ ಭರತ್ ಅವರನ್ನು ಬೆಂಬಲಿಸಿದ್ದರು. ” ಕೆ.ಎಸ್.ಭರತ್ ಈಗ ತಂಡಕ್ಕೆ ಚೆನ್ನಾಗಿ ಆಡುತ್ತಿದ್ದಾರೆ. ಅವರು ವೃದ್ಧಿಮಾನ್ ಸಹಾ ರೀತಿ ಕೀಪಿಂಗ್ ಮಾಡುತ್ತಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಆಡಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಕೆ.ಎಲ್.ರಾಹುಲ್ ಫಿಟ್ ಆಗಿದ್ದರೆ ಅವರನ್ನೆ ಆಯ್ಕೆ ಮಾಡುತ್ತಿದ್ದೆ ಎಂಬುದಾಗಿ ಹರ್ಭಜನ್​ ಸಿಂಗ್​ ಸ್ಟಾರ್​ ಸ್ಪೊರ್ಟ್ಸ್​ ಜತೆ ಮಾತನಾಡುತ್ತಾ ಹೇಳಿದ್ದರು.

Exit mobile version