ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾಂಕೋವಿಕ್(Natasa Stankovic) ಈಗಾಗಲೇ ಅಧಿಕೃತವಾಗಿ ವಿಚ್ಛೇದನ(Hardik-Natasa Divorce) ಪಡೆದುಕೊಂಡಿದ್ದಾರೆ. ಈ ಜಂಟಿ ಹೇಳಿಕೆ ಪ್ರಕಟಿಸುವ ಮೂಲಕ ಇವರಿಬ್ಬರು ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಈ ಜೋಡಿ ಡಿವೋರ್ಸ್ ಪಡೆಯಲು ಕಾರಣ ಏನಿರಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಇದರ ಬೆನ್ನಲ್ಲೇ ಹಾರ್ದಿಕ್ ಮತ್ತು ನತಾಶಾರ ಆಪ್ತ ಮೂಲಗಳು ಸ್ಫೋಟಕ ಸಂಗತಿಯೊಂದನ್ನು ಬಹಿರಂಗಪಡಿಸಿವೆ.
ಹೌದು, ಹಾರ್ದಿಕ್ ಮತ್ತು ನತಾಶಾ ನಡುವಿನ ಬ್ರೇಕಪ್ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್ಗೆ ಕಾರಣವಾಯಿತು. ಇದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಬಗ್ಗೆ ಯಾವುದೇ ತಪ್ಪು ಸುದ್ದಿ ಹಬ್ಬಿಸಬಾರದು ಎಂದು ಆಪ್ತ ಮೂಲಗಳು ತಿಳಿಸಿವೆ.
“ನಾಲ್ಕು ವರ್ಷಗಳ ಕಾಲ ಒಂದಾಗಿ ಜೀವನ ನಡೆಸಿದ್ದ ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಇದು ನಮ್ಮಿಬ್ಬರ ಹಿತಾಸಕ್ತಿಗಾಗಿ ಎಂದು ನಾವು ನಂಬುತ್ತೇವೆ. ಇದು ಕಠಿಣ ನಿರ್ಧಾರವಾಗಿದೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವೆ. ಮಗ ನಮ್ಮಿಬ್ಬರ ಜೀವನದ ಕೇಂದ್ರದಲ್ಲಿ ಮುಂದುವರಿಯುತ್ತಾನೆ” ಎಂದು ಬರೆದುಕೊಂಡು ಪಾಂಡ್ಯ ವಿಚ್ಛೇದನವನ್ನು ಖಚಿತಪಡಿಸಿದ್ದರು.
ಇದನ್ನೂ ಓದಿ Hardik Pandya: ವಿಚ್ಛೇದಿತ ಪತ್ನಿ ನತಾಶಾಗೆ ಶೇ.70ರಷ್ಟು ಜೀವನಾಂಶ ನೀಡಲಿದ್ದಾರಾ ಹಾರ್ದಿಕ್ ಪಾಂಡ್ಯ?
ಮಗ ಯಾರ ಬಳಿ ಇರುತ್ತಾನೆ?
ದಂಪತಿ ಬೇರೆಯಾದ ಬಳಿಕ ಮಗ ಯಾರ ಬಳಿಯಿರುತ್ತಾನೆ ಎಂಬ ಪ್ರಶ್ನೆಗಳಿಗೂ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಕೆಯಲ್ಲಿ ಉತ್ತರಿಸಿದ್ದಾರೆ. “ನಾನು ಮತ್ತು ನತಾಶಾ ಇಬ್ಬರೂ ಪುತ್ರ ಅಗಸ್ತ್ಯನನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್ ರೀತಿಯಲ್ಲಿ ವಿವಾಹವಾಗಿದ್ದರು.
ಪಾಂಡ್ಯ ತನ್ನ ಆಸ್ತಿಯಲ್ಲಿ ಪತ್ನಿಗೆ ಜೀವನಾಂಶವಾಗಿ ಶೇ. 70 ಪ್ರತಿಶತವನ್ನು ಬಿಟ್ಟುಕೊಡಬೇಕು ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಸದ್ಯ ಪಾಂಡ್ಯ ಅವರು ಪತ್ನಿಗೆ ಜೀವನಾಂಶ ನೀಡುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳಾಗಿದೆ. ನತಾಶ ಇದುವರೆಗೆ ಹಾರ್ದಿಕ್ ಅವರಿಂದ ಜೀವನಾಂಶವಾಗಿ ಯಾವುದೇ ರೀತಿಯ ಪಾಲು ಕೇಳಿಲ್ಲ. ಹೀಗಾಗಿ ಪಾಂಡ್ಯ ಮತ್ತು ನತಾಶ ಜೀವನಾಂಶದ ಬಗ್ಗೆ ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ.