ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದ ರೋಹಿತ್ ಶರ್ಮ(Rohit Sharma) ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನಾಯಕತ್ವ ನೀಡಿದ ಕುರಿತು ಈಗಾಗಲೇ ಪರ-ವಿರೋಧಗಳ ಚರ್ಚೆ ನಡೆದಿದೆ. ಅಲ್ಲದೆ ತಂಡದ ಕೋಚ್ ಕೂಡ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ರೋಹಿತ್ ಅಭಿಮಾನಿಗಳು ಮಾತ್ರ ಹಾರ್ದಿಕ್ ಪಾಂಡ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಅಲ್ಲದೆ ಮುಂಬೈ ತಂಡದ ಆಟಗಾರರು ಕೂಡ ಪರೋಕ್ಷವಾಗಿ ಪಾಂಡ್ಯ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಪಾಂಡ್ಯ ತಮ್ಮನ್ನು ವಿರೋಧಿಸಿದವರಿಗೆ ನಟ ಅಮಿತಾಭ್ ಬಚ್ಚನ್ ಶೈಲಿಯಲ್ಲಿ ತಕ್ಕ ಉತ್ತರ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ‘ಸಂಬಂಧಗಳಲ್ಲಿ ನಾನು ನಿಮ್ಮ ಕ್ಯಾಪ್ಟನ್ ಆಗುತ್ತೇನೆ. ನನ್ನ ಹೆಸರು ಹಾರ್ದಿಕ್ ಪಾಂಡ್ಯ’.(ರಿಶ್ತೆ ಮೆ ಹಮ್ ತುಮಾರೆ ಕ್ಯಾಪ್ಟನ್ ಲಗ್ತೇ ಹೈ ನಾಮ್ ಹೈ ಪಾಂಡೆ) ಎಂದು ಹೇಳುವ ಮೂಲಕ ತಮ್ಮನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಜತೆಗೆ ರೋಹಿತ್ ಶರ್ಮ ಅವರ ಅಭಿಮಾನಿಗಳು ಮತ್ತೆ ಕೆರಳುವಂತೆ ಮಾಡಿದೆ. ಇದು ರೋಹಿತ್ ಅವರಿಗೆ ಅಪಮಾನ ಮಾಡಲೆಂದೇ ಪಾಂಡ್ಯ ಈ ರೀತಿ ಹೇಳಿದ್ದಾರೆ ಎಂದು ವಿಡಿಯೊಗೆ ರೋಹಿತ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
Attention all Rohit Sharma and MI fans:
— Vipin Tiwari (@Vipintiwari952_) March 3, 2024
– Hardik Pandya once again reiterated, "Hardik Pandya Rishtey me apke Captain lagte hai." Agree or weep! pic.twitter.com/RL22RtXUoL
ಇತ್ತೀಚೆಗೆ ಮುಂಬೈಯ ಮುಖೇಶ್ ಪಟೇಲ್ ಕಾಲೇಜಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಭಾವಚಿತ್ರವಿರುವ ಪೋಸ್ಟರ್ ಒಂದನ್ನು ಹಾಕಲಾಗಿತ್ತು. ಆದರೆ, ಇದನ್ನು ತೆಗೆದುಹಾಕುವಂತೆ ರೋಹಿತ್ ಅವರ ಕಟ್ಟಾ ಅಭಿಮಾನಿಗಳಾದ ವಿದ್ಯಾರ್ಥಿಗಳ ಗುಂಪೊಂದು ಕಾಲೇಜು ಆಡಳಿತ ಮಂಡಳಿ ಜತೆ ಸಮರ ಸಾರಿತ್ತು. ಇದಕ್ಕೆ ಕಾಲೇಜು ಆಡಳಿತ ಮಂಡಳಿ ನೋ ಎಂದಿತ್ತು. ಸಿಟ್ಟಿಗೆದಿದ್ದ ಈ ವಿದ್ಯಾರ್ಥಿಗಳು ಪೋಸ್ಟರ್ ಹರಿದು ಹಾಕಿದ್ದರು.
ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್ ಆಟಗಾರ
‘ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕಠಿಣ ನಿರ್ಧಾರ. ಆದರೆ ಇದು ಅನಿವಾರ್ಯವಾಗಿತ್ತು. ತಂಡದ ಮುಂದಿನ ಭವಿಷ್ಯ ನೋಡಿ ಈ ನಿರ್ಧಾರ ಕೈಗೊಂಡಿದ್ದೇವೆ. ರೋಹಿತ್ ಯಾವತ್ತೂ ತಂಡದ ಜತೆಗಿದ್ದು ಮಾರ್ಗದರ್ಶನ ನೀಡುತ್ತಾರೆ’ ಎಂದು ಫ್ರಾಂಚೈಸಿಯ ಜಾಗತಿಕ ಕ್ರಿಕೆಟ್ ಮುಖ್ಯಸ್ಥ ಮಹೇಲ ಜಯವರ್ಧನೆ(Mahela Jayawardene) ಸ್ಪಷ್ಟನೆ ನೀಡಿದ್ದರು.
ಯಾರು ಏನೇ ಹೇಳಿ ಸಮರ್ಥಿಸಿಕೊಂಡರೂ ಕೂಡ ರೋಹಿತ್ ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರು ಫ್ರಾಂಚೈಸಿಯ ಈ ನಿರ್ಧಾರವನ್ನು ಖಂಡಿಸಿದ್ದಾರೆ. 5 ಬಾರಿ ಟ್ರೋಫಿ ಗೆದ್ದ ನಾಯಕನನ್ನು ಈ ರೀತಿ ಏಕಾಏಕಿ ತಂಡದಿಂದ ಕೈಬಿಡಿರುವುದು ಸರಿಯಲ್ಲ. ಅವರಿಗೆ ಮತ್ತೆ ನಾಯಕನ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೆಲ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.