ಮುಂಬಯಿ: ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರು ಕಾರಣ ಹಾರ್ದಿಕ್ ಪಾಂಡ್ಯಗೆ(Hardik Pandya) ಟಿ20 ತಂಡದ ನಾಯಕತ್ವ ನೀಡಲು ಬಿಸಿಸಿಐ ಹಿಂದೇಟು ಹಾಕಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ(Hardik Pandya Fitness) ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ 2 ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡುವವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿರುವ ಫೋಟೊಗಳ ಪೈಕಿ ಮೊದಲನೆಯದ್ದು 2023ರ ಏಕದಿನ ವಿಶ್ವಕಪ್ ನಂತರ ಗಾಯಗೊಂಡಾಗ ಹಾಗು ಎರಡನೇ ಫೋಟೋ ಪ್ರಸ್ತುತ ಸಮಯದ್ದಾಗಿದೆ. ಮೊದಲ ಫೋಟೊದಲ್ಲಿ ದಪ್ಪವಾಗಿ ಕಾಣುವ ಪಾಂಡ್ಯ 2ನೇ ಫೋಟೊದಲ್ಲಿ ಸಿಕ್ಸ್ ಪ್ಯಾಕ್ ಮೂಲಕ ಕಾಣಿಸಿಕೊಂಡಿದ್ದಾರೆ. ಈ ಫೋಟೊಗೆ ಪಾಂಡ್ಯ, “ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ. ನಾವೆಲ್ಲರೂ ನಮ್ಮ ಕೈಲಾದಷ್ಟು ಪ್ರಯತ್ನಿಸೋಣ ಮತ್ತು ನಮ್ಮ ಫಿಟ್‌ನೆಸ್‌ನಲ್ಲಿ ಕೆಲಸ ಮಾಡೋಣ’ ಎಂದು ಬರೆದುಕೊಂಡಿದ್ದಾರೆ.
ರೋಹಿತ್ ಬಳಿಕ ಹಾರ್ದಿಕ್ ಪಾಂಡ್ಯರನ್ನೇ(Hardik Pandya) ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇದೀಗ ಬಿಸಿಸಿಐ(BCCI) ಪಾಂಡ್ಯಗೆ ನಾಯಕತ್ವ ನೀಡಲು ಹಿಂದೇಟು ಹಾಕಿದ್ದು, ಸೂರ್ಯಕುಮಾರ್ ಯಾದವ್ಗೆ(Suryakumar Yadav) ನಾಯಕತ್ವ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.
ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Natasa Stankovic : ಹಾರ್ದಿಕ್ ಪಾಂಡ್ಯಗೆ ಕೈಕೊಟ್ಟು ಸರ್ಬಿಯಾದಲ್ಲಿ ಜಾಲಿ ಟ್ರಿಪ್ ಹೊರಟ ನತಾಶಾ
ಸೂರ್ಯಕುಮಾರ್ ಯಾದವ್ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್ ಗೌತಮ್ ಗಂಭೀರ್ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.
ಸೂರ್ಯಕುಮಾರ್ ಯಾದವ್ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಮುಂದಿನ ಟಿ20 ತಂಡದ ನಾಯಕ ಯಾರೆಂಬುದು ಖಚಿತಗೊಳ್ಳಲಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್ ಗೌತಮ್ ಗಂಭೀರ್ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಲಕ್ನೋ ತಂಡದಲ್ಲಿ ರಾಹುಲ್ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ.