ವಡೋದರಾ: ಕಳೆದ ವರ್ಷ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡು ಕ್ರಿಕೆಟ್ನಿಂದ ದೂರ ಉಳಿದಿರುವ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಶೀಘ್ರದಲ್ಲೇ ತಂಡ ಸೇರುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಪಾಂಡ್ಯ ನೆಟ್ಸ್‌ನಲ್ಲಿ ಬೌಲಿಂಗ್, ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ(hardik pandya practice). ಈ ವಿಡಿಯೊವನ್ನು ಅವರು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯ ಆಡುವಾಗ ಚೆಂಡನ್ನು ತಡೆಯುವ ಯತ್ನದಲ್ಲಿ ಅವರ ಹಿಮ್ಮಡಿಗೆ ಗಾಯವಾಗಿತ್ತು. ಬಳಿಕ ಅವರು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಸದ್ಯ ಸಂಪೂರ್ಣ ಚೇತರಿಕೆ ಕಂಡಿರುವ ಪಾಂಡ್ಯ ಕಠಿಣ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸ ಆರಂಭಿಸುವ ಮುನ್ನ ಮಾತನಾಡಿದ ಪಾಂಡ್ಯ, 17 ವರ್ಷದ ಹಿಂದೆ ನನ್ನ ಕ್ರಿಕೆಟ್ ಪಯಣ ಆರಂಭವಾಗಿದ್ದ ಇದೇ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ಗೆ ಅಭ್ಯಾಸ ನಡೆಸುತ್ತಿರುವುದು ಸಂತಸ ತಂದಿದೆ. ಈ ಮೈದಾನದಲ್ಲಿ ಮರೆಯಲಾಗದ ಸ್ಮರಣೀಯ ನೆನಪುಗಳು ಇವೆ” ಎಂದು ಹೇಳಿದರು.
Giving it all I got, every single day ✌️💥 pic.twitter.com/hYwk7oNOoL
— hardik pandya (@hardikpandya7) January 27, 2024
ಪಾಂಡ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮೂಲಕ ಕ್ರಿಕೆಟ್ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡ ತೊರೆದಿರುವ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ.
ಇದನ್ನೂ ಓದಿ Hardik Pandya: ಫಿಟ್ನೆಸ್ ವಿಡಿಯೊ ಹಂಚಿಕೊಂಡು ಎಚ್ಚರಿಕೆ ನೀಡಿದ ಹಾರ್ದಿಕ್ ಪಾಂಡ್ಯ
2022-23 ರಿಂದ ಗುಜರಾತ್ ಟೈಟಾನ್ಸ್ ಪರ 31 ಪಂದ್ಯಗಳನ್ನು ಆಡಿರುವ ಪಾಂಡ್ಯ, 37.86 ರ ಸರಾಸರಿಯಲ್ಲಿ 133 ಸ್ಟ್ರೈಕ್ ರೇಟ್‌ನಲ್ಲಿ 833 ರನ್ ಗಳಿಸಿದ್ದರು. ಇದರಲ್ಲಿ ಆರು ಅರ್ಧ ಶತಕಗಳು ಬಾರಿಸಿದ್ದರು. ಅಜೇಯ 87 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಬೌಲಿಂಗ್ನಲ್ಲಿಯೂ ಕಮಾಲ್ ಮಾಡಿ 11 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 17 ರನ್ಗೆ 3 ವಿಕೆಟ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಪಾಂಡ್ಯ ಅವರು 2015-2021ರಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟು 92 ಪಂದ್ಯಗಳನ್ನು ಆಡಿದ್ದರು. 153 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 27.33 ರ ಸರಾಸರಿಯಲ್ಲಿ 1,476 ರನ್ ಗಳಿಸಿದ್ದಾರೆ, ನಾಲ್ಕು ಅರ್ಧ ಶತಕಗಳು ಹಾಗೂ 42 ವಿಕೆಟ್‌ಗಳನ್ನು ಪಡೆದಿದ್ದಾರೆ.
ಜಿಮ್ನಲ್ಲಿ ಕಸರತ್ತು ಮಾಡಿದ್ದ ಪಾಂಡ್ಯ
2 ವಾರಗಳ ಹಿಂದೆ ಪಾಂಡ್ಯ ತೀವ್ರವಾದ ಜಿಮ್ ಸೆಷನ್‌ನಲ್ಲಿ ಅನೇಕ ಕಠಿಣ ವ್ಯಾಯಾಮಗಳಲ್ಲಿ ತೊಡಗಿಕೊಂಡ ವಿಡಿಯೊವನ್ನು ಹಂಚಿಕೊಂಡು “ಪ್ರಗತಿ, ಪ್ರತಿದಿನ” ಎಂಬ ಶೀರ್ಷಿಕೆಯನ್ನು ನೀಡಿದ್ದರು. ಈ ಮೂಲಕ ತಾನು ಗಾಯದಿಂದ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು.
ಹಿರಿಯರ ಆಟಗಾರರನ್ನು ತಂಡದಿಂದ ಕೈಬಿಟ್ಟು ಇದೇ ವರ್ಷ ನಡೆಯುವ ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಟಿ20 ವಿಶ್ವಕಪ್ ಭಾರತ ತಂಡ ವೇಳಾಪಟ್ಟಿಯಲ್ಲಿಯೂ ಪಾಂಡ್ಯ ಫೋಟೊ ಕಂಡುಬಂದಿತ್ತು. ಆದರೆ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮ ಅವರು ತಂಡದ ನಾಯಕನಾಗಿ ಮತ್ತೆ ಮುಂದುವರಿದ ಕಾರಣ ಪಾಂಡ್ಯಗೆ ನಾಯಕತ್ವ ಸಿಗುವುದಿಲ್ಲ ಎನ್ನುವುದು ಖಚಿತವಾಯಿತು. 14 ತಿಂಗಳಿನಿಂದ ಭಾರತ ಪರ ಟಿ20 ಆಡದ ವಿರಾಟ್ ಕೊಹ್ಲಿ ಮತ್ತು ರೋಹಿತ್ ತಂಡಕ್ಕೆ ಆಗಮಿಸುವ ಮೂಲಕ ಉಭಯ ಆಟಗಾರರು ಕೂಡ ವಿಶ್ವಕಪ್ ಆಡುತ್ತಾರೆ ಎನ್ನುವುದು ತಿಳಿದುಬಂದಿತ್ತು.