ಮುಂಬಯಿ: ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದ ವೇಳೆ ಗಾಯಗೊಂಡು ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿದ್ದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು, ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(Australia, South Africa) ವಿರುದ್ಧದ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ವಿಶ್ವಕಪ್ ಮುಗಿದ ತಕ್ಷಣ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿ ನವೆಂಬರ್ 22 ರಿಂದ ಡಿಸೆಂಬರ್ 3 ತನನ ನಡೆಯಲಿದೆ. ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ವಿಶ್ವಕಪ್ ಆಡಿದ ಹಲವು ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ರೋಹಿತ್, ಕೊಹ್ಲಿ, ಬುಮ್ರಾ, ಶಮಿ, ಜಡೇಜಾ ಅವರು ಈ ಸರಣಿಯಿಂದ ಹೊರಗುಳಿಯಬಹುದು. ಕೆ.ಎಲ್ ರಾಹುಲ್ ಅವರು ನಾಯಕತ್ವ ವಹಿಸುವ ಸಾಧ್ಯತೆ ಅಧಿಕ.
ಆಸ್ಟ್ರೇಲಿಯಾ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20 ಪಂದ್ಯ. ನ.22, ವಿಶಾಖಪಟ್ಟಣ. ಆರಂಭ, ಸಂಜೆ 7 ಗಂಟೆ.
ದ್ವಿತೀಯ ಟಿ20 ಪಂದ್ಯ. ನ.26, ತಿರುವನಂತಪುರಂ. ಆರಂಭ, ಸಂಜೆ 7 ಗಂಟೆ.
ಮೂರನೇ ಟಿ20, ನ.28,ಗುವಾಹಟಿ. ಆರಂಭ, ಸಂಜೆ 7 ಗಂಟೆ.
ನಾಲ್ಕನೇ ಟಿ20, ಡಿ.1, ನಾಗ್ಪರ. ಆರಂಭ, ಸಂಜೆ 7 ಗಂಟೆ.
ಐದನೇ ಟಿ20, ಡಿ.3, ಹೈದರಾಬಾದ್. ಆರಂಭ, ಸಂಜೆ 7 ಗಂಟೆ.
ಬೌಂಡರಿ ತಡೆಯುವ ಯತ್ನದಲ್ಲಿ ಗಾಯಗೊಂಡಿದ್ದ ಪಾಂಡ್ಯ
ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 19ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದು ಪಾದದ ಗಾಯಕ್ಕೆ ತುತ್ತಾಗಿದ್ದರು. ಬಳಿಕ ನೋವಿನಿಂದಾಗಿ ಮೈದಾನ ತೊರೆದಿದ್ದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದ್ದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದ್ದರು. ಬಳಿಕ ಮೂರು ಪಂದ್ಯಗಳಿಂದ ಹೊರಗುಳಿದು ಚಿಕಿತ್ಸೆ ಪಡೆದರೂ ಗಾಯದಿಂದ ಚೇತರಿಕೆ ಕಾಣದ ಕಾರಣ ಅಂತಿಮವಾಗಿ ವಿಶ್ವಕಪ್‌ನಿಂದಲೇ ಹೊರಬಿದ್ದರು. ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ(prasidh krishna) ತಂಡ ಸೇರಿದ್ದರು.
ಇದನ್ನೂ ಓದಿ Actor Rajinikanth: ಈ ಸಲ ಕಪ್ ನಮ್ದೆ; ಭವಿಷ್ಯ ನುಡಿದ ರಜನಿಕಾಂತ್!
ತಂಡ ವಿಶ್ವಕಪ್ ಗೆಲ್ಲಲಿದೆ
“ವಿಶ್ವಕಪ್‌ನ ಉಳಿದ ಭಾಗವನ್ನು ನಾನು ಕಳೆದುಕೊಳ್ಳುತ್ತೇನೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೂ ನಾನು ನಮ್ಮ ತಂಡದೊಂದಿಗೆ ಇದ್ದು ಅವರನ್ನು ಹುರಿದುಂಬಿಸುತ್ತೇನೆ. ನನಗೆ ಬೆಂಬಲ ನೀಡಿದ್ದಕ್ಕೆ ಹಾಗೂ ನೀಡುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ತಂಡ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಟ್ವಿಟರ್ ಎಕ್ಸ್ನಲ್ಲಿ ಭಾವುಕ ಪತ್ರವೊಂದನ್ನು ಬರೆದಿದ್ದರು.
Tough to digest the fact that I will miss out on the remaining part of the World Cup. I'll be with the team, in spirit, cheering them on every ball of every game. Thanks for all the wishes, the love, and the support has been incredible. This team is special and I'm sure we'll… pic.twitter.com/b05BKW0FgL
— hardik pandya (@hardikpandya7) November 4, 2023
ದಕ್ಷಿಣ ಆಫ್ರಿಕಾ ವಿರುದ್ಧ ಡಿ.10ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಇದಾದ ಬಳಿಕ ಡಿ.17ರಿಂದ ಏಕದಿನ, ಡಿ.26ರಿಂದ ಟೆಸ್ಟ್ ಸರಣಿ ನಡೆಯಲಿದೆ. ಜನವರಿ 3 ತನಕ ಈ ಸರಣಿ ಸಾಗಲಿದೆ.