Site icon Vistara News

Hardik Pandya: ಗಾಯವನ್ನು ಮುಚ್ಚಿಟ್ಟು ಐಪಿಎಲ್​ ಆಡುತ್ತಿದ್ದಾರಾ ಹಾರ್ದಿಕ್​ ಪಾಂಡ್ಯ?

Hardik Pandya

ಮುಂಬಯಿ: ಮುಂಬೈ ಇಂಡಿಯನ್ಸ್(mumbai indians)​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂಡ ಇದನ್ನು ಮರೆ ಮಾಚಿ ಐಪಿಎಲ್(IPL 2024)​ ಆಡುತ್ತಿದ್ದಾರೆ ಎನ್ನುವ ಚರ್ಚೆ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ. ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಪಾಂಡ್ಯ ಬಳಿಕ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದರು. ಐಪಿಎಲ್​ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದ ಪಾಂಡ್ಯ ಇದೀಗ ಮತ್ತೆ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ ಗಾಯಗೊಂಡಂತೆ ಕಾಣುತ್ತಿದ್ದಾರೆ, ಆದರೆ ಅವರು ಗಾಯದ ವಿಷಯ ಮುಚ್ಚಿಡುತ್ತಿದ್ದಾರೆ ಎನಿಸುತ್ತಿದೆ ಎಂದು ನ್ಯೂಜಿಲ್ಯಾಂಡ್​ ವೀಕ್ಷಕ ವಿವರಣೆಗಾರ ಸೈಮನ್ ಡೂಲ್ ಹೇಳಿದ್ದಾರೆ. ಪಾಂಡ್ಯ ಈ ಐಪಿಎಲ್‌ನ ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ್ದರು. 2ನೇ ಪಂದ್ಯದಲ್ಲಿ ಸಂಪೂರ್ಣ 4 ಓವರ್ ಕೋಟಾ ಪೂರ್ತಿಗೊಳಿಸಿದ್ದರು. ಆನಂತರ 2 ಪಂದ್ಯಗಳಲ್ಲಿ ಬೌಲಿಂಗ್​ ಮಾಡದ ಅವರು, ಆರ್‌ಸಿಬಿ ವಿರುದ್ಧ ಕೇವಲ 1 ಓವ‌ರ್ ಎಸೆದಿದ್ದರು. ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಕಾರಣದಿಂದ ಅವರು ಬೌಲಿಂಗ್​ ಮಾಡಿಲ್ಲ ಎಂದು ಕೆಲ ಕ್ರಿಕೆಟ್​ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾಂಡ್ಯ ಅವರು ಮೈದಾನದಲ್ಲಿ ನಡೆದಾಡುವ ವೇಳೆ ಬೆನ್ನು ನೋವಿನಿಂದ ಬಳಲುತ್ತಿರುವ ರೀತಿಯಲ್ಲಿ ನಡೆದಾಡಿದಂತೆ ಕಾಣಿಸುತ್ತದೆ. ಬಗ್ಗಿ ನಡೆಯುವುದನ್ನು ಕಳೆದ ಕೆಲವು ಪಂದ್ಯಗಳಲ್ಲಿ ನೋಡಿದ್ದೇವೆ. ಒಟ್ಟಾರೆ ಪಾಂಡ್ಯ ಗಾಯವನ್ನು ಮುಚ್ಚಿಚ್ಚು ಐಪಿಎಲ್​ ಆಡುತ್ತಿದ್ದಾರಾ? ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇಂದು ಚೆನ್ನೈ ವಿರುದ್ಧ ಕಣಕ್ಕೆ


ಹ್ಯಾಟ್ರಿಕ್​ ಸೋಲಿನ ಬಳಿಕ ಎಚ್ಚೆತ್ತುಕೊಂಡ ಮುಂಬೈ ಇಂಡಿಯನ್ಸ್ ಇದೀಗ​ ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಠಗೊಳ್ಳುತ್ತಾ ಶ್ರೇಷ್ಠ ಪ್ರದರ್ಶನವನ್ನು ತೋರುತ್ತಿದೆ. ಇಂದು ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್​, ಬದ್ಧ ಎದುರಾಳಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಮುಂಬೈಗೆ ತವರಿನ ಪಂದ್ಯವಾದ ಕಾರಣ ಗೆಲ್ಲುವ ಅವಕಾಶ ಹೆಚ್ಚು.

ಗಾಯದಿಂದ ಚೇತರಿಕೆ ಕಂಡು ತಂಡಕ್ಕೆ ಮರಳಿದ ಸೂರ್ಯಕುಮಾರ್​ ಅವರಂತು ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಆರಂಭಿಕರಾದ ರೋಹಿತ್​ ಮತ್ತು ಇಶಾನ್​ ಕೂಡ ಸದ್ಯ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಒಬ್ಬರೇ ತಮ್ಮ ಮೊನಚಾದ ಬೌಲಿಂಗ್​ ಮೂಲಕ ಎದುರಾಳಿಗಳ ಕೋಟೆಯನ್ನು ಪುಡಿಮಾಡುವಲ್ಲಿ ಸಮರ್ಥರಿದ್ದಾರೆ. ಇದಕ್ಕೆ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯವೇ ಸಾಕ್ಷಿ.

ಇದನ್ನೂ ಓದಿ IPL 2024: ಕ್ರಿಕೆಟ್​ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣ; ಒಂದೇ ದಿನ 2 ಪಂದ್ಯ

ಚೆನ್ನೈ ಕೂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಬಲಿಷ್ಠವಾಗಿದೆ, ನಾಯಕ ಗಾಯಕ್ವಾಡ್​ ಮತ್ತು ಅಜಿಂಕ್ಯಾ ರಹಾನೆ ಅವರು ಮುಂಬೈ ಅವರೇ ಆಗಿರುವ ಕಾರಣ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ ಅನುಭವ ಇದ್ದೇ ಇದೆ. ಜತೆಗೆ ಶಾರ್ದೂಲ್​ ಠಾಕೂರ್​ಗೂ ತವರಿನ ಪಂದ್ಯ. ಹೀಗಾಗಿ ಈ ಮೂವರು ತವರಿನ ಲಾಭವೆತ್ತಬಹುದು. ರಚಿನ್​ ರವೀಂದ್ರ, ಇಂಪ್ಯಾಕ್ಟ್​ ಆಟಗಾರ ಶಿವಂ ದುಬೆ, ರಚಿನ್​ ರವೀಂದ್ರ, ಜಡೇಜಾ ಮತ್ತು ಧೋನಿ ಕೂಡ ಅಂತಿಮ ಹಂತದಲ್ಲಿ ಬಿಗ್​ ಹಿಟ್ಟಿಂಗ್​ ಶಾಟ್​ ಹೊಡೆಯುವ ಚಾಕಕ್ಯತೆ ಹೊಂದಿದ್ದಾರೆ. ಒಟ್ಟಾರೆ ಈ ಪಂದ್ಯವನ್ನು ಅಭಿಮಾನಿಗಳು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಿದ್ದಾರೆ.

Exit mobile version