Site icon Vistara News

Hardik Pandya: ಪಾಂಡ್ಯ ಅಲಭ್ಯದ ಅನುಮಾನಕ್ಕೆ ಸಿಕ್ಕಿತು ಮಹತ್ವದ ಅಪ್​ಡೇಟ್​

hardik pandya

ಬೆಂಗಳೂರು: ಭಾರತ ತಂಡದ ಆಲ್​ರೌಂಡರ್​, ಮುಂಬೈ ಇಂಡಿಯನ್ಸ್ ತಂಡ ನೂತನ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾದ ಕಾರಣ ಮುಂದಿನ ವರ್ಷ ನಡೆಯುವ ಅಫಘಾನಿಸ್ತಾನ ಮತ್ತು ಐಪಿಎಲ್​ ಟೂರ್ನಿಯಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿತ್ತು. ಆದರೆ ಇದೀಗ ಎಲ್ಲ ಅನಿಮಾನಗಳಿಗೆ ತೆರೆ ಬಿದ್ದಿದೆ.

ಹಾರ್ದಿಕ್​ ಪಾಂಡ್ಯ ಅವರು ಪಾದದ ಗಾಯದಿಂದ ಚೇತರಿಸಿಕೊಂಡಿದ್ದು ಅಫಘಾನಿಸ್ತಾನ ಸೇರಿ ಐಪಿಎಲ್​ ಟೂರ್ನಿಯಲ್ಲಿ ನಾಯಕನಾಗಿಯೇ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸದ್ಯಕ್ಕೆ ಪಾಂಡ್ಯ ಕಮ್​ಬ್ಯಾಕ್ ಬಗ್ಗೆ​ ಇದ್ದ ಅನುಮಾನ ದೂರವಾದಂತಿದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ವಿಶ್ವಕಪ್​ ವೇಳೆ ಗಾಯ

ಏಕದಿನ ವಿಶ್ವಕಪ್​ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಲೀಗ್​ ಪಂದ್ಯದಲ್ಲಿ ಬೌಲಿಂಗ್​ ನಡೆಸುವಾಗ ಪಾಂಡ್ಯ ಚೆಂಡನ್ನು ತೆಡೆಯುವ ಪ್ರಯತ್ನದಲ್ಲಿ ಜಾರಿ ಬಿದ್ದು ಪಾದದ ನೋವಿಗೆ ತುತ್ತಾಗಿದ್ದರು. ಬಳಿಕ ಚಿಕ್ಸೆಗೆ ಪಡೆದದರೂ ಗಾಯ ಗಂಭೀರ ಸ್ವರೂಪದಿಂದ ಕೂಡಿದ ಕಾರಣ ಅವರು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದರು.

ಪಾಂಡ್ಯ ಕಮ್​ಬ್ಯಾಕ್​ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೆಲ ದಿನಗಳ ದಿಂದೆ ಹೇಳಿಕೆಯೊಂದನ್ನು ನೀಡಿದ್ದರು. ‘ಪಾಂಡ್ಯ ಆದಷ್ಟು ಬೇಗ ಫಿಟ್ ಆಗಲು ಶ್ರಮಿಸುತ್ತಿದ್ದಾರೆ. ಅವರ ಫಿಟ್​ನೆಸ್​ ಮೇಲೆ ಎನ್​ಸಿಎಯಲ್ಲಿ ನಿಗಾ ಇರಿಸಲಾಗಿದೆ. ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ಧರಾದಾಗ ಮಾಧ್ಯಮಗಳಿಗೆ ತಿಳಿಸಲಾಗುವುದು’ ಎಂದು ಹೇಳಿದ್ದರು. ಶಾ ಹೇಳಿಕೆ ಗಮನಿಸುವಾಗ ಪಾಂಡ್ಯ ಫಿಟ್​ ಆದಂತೆ ತೋರುತ್ತಿಲ್ಲ.

ಇದನ್ನೂ ಓದಿ Hardik Pandya : ರೋಹಿತ್​ ಅಭಿಮಾನಿಗಳಿಗೆ ಖುಷಿ, ಐಪಿಎಲ್​ಗೆ ಪಾಂಡ್ಯ ಅನ್​ಫಿಟ್​

ರೋಹಿತ್​ಗೆ ಆಸಕ್ತಿ ಇಲ್ಲ

ಇನ್ನೊಂದು ಮೂಲಗಳ ಪ್ರಕಾರ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಿಂದ ಈಗಾಗಲೇ ದೂರ ಉಳಿಯಲು ನಿರ್ಧರಿಸಿದ್ದು ಕೇವಲ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಏಕದಿನ ವಿಶ್ವಕಪ್​ ಸೋಲಿನ ಬಳಿಕವೇ ಉಭಯ ಆಟಗಾರರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಉಭಯ ಆಟಗಾರರು ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಇದುವರೆಗೆ ಹೇಳಿಲ್ಲ. ಕೆಲ ದಿನಗಳಲ್ಲಿ ಈ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯಿಲ್ಲ. ಹೀಗಾಗಿ ಪಾಂಡ್ಯ ಅವರೇ ಟಿ20 ನಾಯಕ ಎಂದು ಭಾವಿಸಲಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ 20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಪಾದ ತಿರುಚಿದೆ. ಈಗ ಅವರು ಅಸ್ಥಿರಜ್ಜುಗೆ ಗ್ರೇಡ್ 2 ಗಾಯದಿಂದ ಬಳಲುತ್ತಿದ್ದಾರೆ. ವಿಶ್ವದ ನಂ.1 ಬ್ಯಾಟ್ಸ್ಮನ್ ಚೇತರಿಸಿಕೊಳ್ಳಲು 7 ವಾರಗಳು ಬೇಕಾಗಬಹುದು. ಫೆಬ್ರವರಿ ವೇಳೆಗೆ ಫಿಟ್ ಆಗುವ ಸಾಧ್ಯತೆಯಿದೆ. ಅಂದರೆ ಅವರು ಅಫಘಾನಿಸ್ತಾನ ವಿರುದ್ಧದ ಸರಣಿಗೆ ಲಭ್ಯರಿಲ್ಲ.

ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿ ಜನವರಿ 11ರಿಂದ ಆರಂಭವಾಗಲಿದೆ. ಜ.17ಕ್ಕೆ ಮುಕ್ತಾಯ ಕಾಣಲಿದೆ. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿದೆ.

ಮುಂಬೈ ತಂಡಕ್ಕೆ ನಾಯಕ

ಹಾರ್ದಿಕ್​ ಪಾಂಡ್ಯ (Hardik Pandya) ಅವರನ್ನು ಗುಜರಾತ್ ಟೈಟಾನ್ಸ್​​ ತಂಡದಿಂದ ಮುಂಬಯಿ ತಂಡಕ್ಕೆ 15 ಕೋಟಿ ರೂ.ಗೆ ಟ್ರೇಡ್​ ಮಾಡಿ ಕರೆ ತಂದಾಗ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಅಂತೆಯೇ ರೋಹಿತ್ ಶರ್ಮ​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಪಾಂಡ್ಯ ಅವರಿಗೆ ನಾಯಕತ್ವದ ಪಟ್ಟ ಕಟ್ಟಲಾಯಿತು. ಇದು ರೋಹಿತ್​ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.

Exit mobile version