ಮ್ಯಾಂಚೆಸ್ಟರ್: ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್‌ನ (ODI Cricket) ಬೌಲಿಂಗ್‌ನಲ್ಲಿ ಇದುವರೆಗಿನ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.
ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಅವರು ಈ ದಾಖಲೆ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು ಏಳು ಓವರ್‌ಗಳನ್ನು ಎಸೆದು ಕೇವಲ ೨೪ ರನ್‌ಗಳನ್ನು ನೀಡಿ ೪ ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ೩ ಮೇಡನ್ ಓವರ್‌ಗಳು. ಈ ಮೂಲಕ ಅವರು ಆತಿಥೇಯ ಇಂಗ್ಲೆಂಡ್ ತಂಡ ದೊಡ್ಡ ಮೊತ್ತ ಪೇರಿಸದಂತೆ ತಡೆಯೊಡ್ಡಿದ್ದರು.
ಎಲ್ಲವೂ ಇಂಗ್ಲೆಂಡ್‌ನಲ್ಲಿ
ಹಾರ್ದಿಕ್ ಪಾಂಡ್ಯ ಪ್ರಸ್ತುತ ಎಲ್ಲ ಮಾದರಿಯ ಕ್ರಿಕೆಟ್‌ಗೂ ಒಗ್ಗಿಕೊಳ್ಳುತ್ತಿದ್ದಾರೆ. ಹೀಗಾಗಿ ಹಾಲಿ ಇಂಗ್ಲೆಂಡ್ ಟೂರ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದೇ ರೀತಿ ಪಾಂಡ್ಯ ಮೂರು ಮಾದರಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವುದು ಇಂಗ್ಲೆಂಡ್‌ನಲ್ಲಿಯೇ. ಟೆಸ್ಟ್ ಕ್ರಿಕೆಟ್‌ನಲ್ಲಿ ೬ ಓವರ್‌ಗಳಲ್ಲಿ ೨೮ ರನ್ ನೀಡಿ ೫ ವಿಕೆಟ್ ಕಬಳಿಸಿದ್ದರು. ಅದೇ ರೀತಿ ಟಿ೨೦ ಮಾದರಿಯಲ್ಲಿ ೪ ಓವರ್ ಎಸೆದು ೩೩ ರನ್‌ಗಳ ವೆಚ್ಚದಲ್ಲಿ ೪ ವಿಕೆಟ್ ಉರುಳಿಸಿದ್ದರು.
ಗ್ರಾಂಡ್ ರೀ ಎಂಟ್ರಿ
ಪ್ರದರ್ಶನ ವೈಫಲ್ಯ ಹಾಗೂ ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ಈ ಹಿಂದೆ ಟೀಕೆಗೆ ಒಳಗಾಗಿದ್ದರು. ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿತ್ತು ಕೂಡ. ಆದರೆ, ಐಪಿಎಲ್ ೧೫ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ, ಚೊಚ್ಚಲ ಆವೃತ್ತಿಯಲ್ಲಿ ಕಪ್ ಗೆದ್ದುಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ಭಾರತ ತಂಡಕ್ಕೆ ಮರು ಎಂಟ್ರಿ ಪಡೆದುಕೊಂಡರು. ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ನೇತೃತ್ವ ವಹಿಸಿ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಸಿದ್ದರು. ಇಂಗ್ಲೆಂಡ್ ವಿರುದ್ಧವೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?