Site icon Vistara News

IND vs PAK | 7 ಅಲ್ಲ, 15 ರನ್‌ ಬೇಕಾಗಿದ್ದರೂ ಗೆಲ್ಲುತ್ತಿದ್ದೆವು ಎಂದ ಪಂದ್ಯ ಶ್ರೇಷ್ಠ ಪಾಂಡ್ಯ

ind vs pak

ದುಬೈ : ಪಾಕಿಸ್ತಾನ ತಂಡದ ವಿರುದ್ಧದ ಏಷ್ಯಾ ಕಪ್‌ (IND vs PAK) ಪಂದ್ಯದ ಗೆಲುವಿನ ರೂವಾರಿ ಹಾರ್ದಿಕ್ ಪಾಂಡ್ಯ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ೨೫ ರನ್‌ ನೀಡಿ ೩ ವಿಕೆಟ್‌ ಕಬಳಿಸಿದ್ದ ಅವರು ಬ್ಯಾಟಿಂಗ್‌ನಲ್ಲಿ ೧೭ ಎಸೆತಗಳಲ್ಲಿ ೩೩ ರನ್‌ ಬಾರಿಸುವ ಮೂಲಕ ಭಾರತಕ್ಕೆ ೫ ವಿಕೆಟ್ ಜಯ ತಂದುಕೊಟ್ಟಿದ್ದಾರೆ. ಅವರ ಅದ್ಭುತ ಪ್ರದರ್ಶನದ ಮೂಲಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಕಳೆದ ವರ್ಷದ ಟಿ೨೦ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿದೆ. ಏತನ್ಮಧ್ಯೆ, ಭಾರತ ತಂಡದ ಗೆಲುವಿಗೆ ಕೊನೇ ಓವರ್‌ನಲ್ಲಿ ೭ ರನ್‌ ಬೇಕಾಗಿತ್ತು. ನಾಲ್ಕನೇ ಎಸೆತದಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಪಾಂಡ್ಯ ಗೆಲುವು ದೊರಕಿಸಿಕೊಟ್ಟಿದ್ದರು. ಪಂದ್ಯದ ಬಳಿಕ ಮಾತನಾಡಿದ ಅವರು ೭ರನ್ ಅಲ್ಲ, ೧ ೫ ರನ್‌ ಬೇಕಾದರೂ ಮಾಡಿ ತಂಡವನ್ನು ಗೆಲ್ಲಿಸಿಕೊಡುತ್ತಿದ್ದೆ ಎಂದು ಹೇಳಿದ್ದಾರೆ.

“ಈ ಮಾದರಿಯ ಚೇಸಿಂಗ್‌ ಪರಿಸ್ಥಿತಿಯಲ್ಲಿ ಓವರ್‌ಗಳ ಲೆಕ್ಕಾಚಾರದಲ್ಲಿ ರನ್‌ ಗಳಿಸುತ್ತಲೇ ಹೋಗಬೇಕು. ಹಾಗೆಯೇ ಕೊನೆಯಲ್ಲಿ ಒಬ್ಬರು ಅನನುಭವಿ ಬೌಲರ್‌ ಉಳಿಯುತ್ತಾರೆ ಎಂಬ ವಿಶ್ವಾಸ ಇತ್ತು. ಹೀಗಾಗಿ ೭ ಅಲ್ಲ, ೧೫ ರನ್‌ ಬೇಕಾದರೂ ಮಾಡಬಹುದು ಎಂಬ ವಿಶ್ವಾಸ ಇತ್ತು,” ಎಂದು ಹೇಳಿದ್ದಾರೆ.

ಕೊನೆ ಓವರ್‌ನಲ್ಲಿ ಬ್ಯಾಟರ್‌ಗಿಂತ ಬೌಲರ್‌ಗಳೇ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ ಎಂಬುದು ನನಗೆ ಗೊತ್ತಿದೆ. ಸಣ್ಣ ತಪ್ಪ ಪಂದ್ಯವನ್ನು ಕಸಿಯಬಹುದು ಎಂದು ಆತಂಕವಿರುತ್ತದೆ. ಅಂಥ ಸಂದರ್ಭವನ್ನು ಬಳಸಿಕೊಳ್ಳುವುದಕ್ಕೆ ಮುಂದಾದೆ,” ಎಂದು ಪಾಂಡ್ಯ ಹೇಳಿದ್ದಾರೆ.

ಇದೇ ವೇಳೆ ಅವರು ತಮ್ಮ ಬೌಲಿಂಗ್‌ ಸಾಧನೆಯ ಬಗ್ಗೆಯೂ ಮಾತನಾಡಿದ್ದಾರೆ “ಅಗತ್ಯಕ್ಕೆ ತಕ್ಕ ಹಾಗೆ ಬೌಲಿಂಗ್ ತಂತ್ರವನ್ನು ಪ್ರಯೋಗಿಸಬೇಕು. ನಾನು ಹೆಚ್ಚಾಗಿ ಶಾರ್ಟ್‌ ಬಾಲ್‌ ಮತ್ತು ಹಾರ್ಡ್‌ ಲೆಂತ್‌ ಎಸೆತಗಳನ್ನು ಪ್ರಯೋಗಿಸಿದೆ. ಯಾವ ಎಸೆತವನ್ನು ಪ್ರಯೋಗಿಸಿದರೆ ಬ್ಯಾಟರ್‌ ತಪ್ಪು ಮಾಡಬಹುದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು,” ಎಂದು ಹೇಳಿದರು.

ರೋಹಿತ್‌ ಶರ್ಮ ಕೂಡ ಹಾರ್ದಿಕ್‌ ಪಾಂಡ್ಯ ಅವರ ಆಟವನ್ನು ಕೊಂಡಾಡಿದ್ದಾರೆ. ಹಾರ್ದಿಕ್‌ ಗಾಯದ ಸಮಸ್ಯೆಯಿಂದ ಮುಕ್ತರಾಗಿ ಬಂದ ಬಳಿಕ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಾಂಡ್ಯ ತಂಡದಲ್ಲಿ ಇರುವ ತನಕ ಅವರು ತಂಡಕ್ಕೇನು ಬೇಕು ಅದನ್ನು ಮಾಡುತ್ತಾರೆ. ಹೀಗಾಗಿ ಅವರು ಕ್ರೀಸ್‌ನಲ್ಲಿ ಇರುವ ತನಕ ಗೆಲುವಿನ ವಿಶ್ವಾಸ ಇತ್ತು,” ಎಂದು ರೋಹಿತ್‌ ಹೇಳಿದ್ದಾರೆ.

ಇದನ್ನೂ ಓದಿ | IND vs PAK | ಕಳೆದ ವರ್ಷ ಸೋತ ಸ್ಟೇಡಿಯಮ್‌ನಲ್ಲೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ಕೊಟ್ಟ ಟೀಮ್ ಇಂಡಿಯಾ

Exit mobile version