Site icon Vistara News

Hardik Pandya: ಸದ್ಯಕ್ಕಿಲ್ಲ ಹಾರ್ದಿಕ್​ ಪಾಂಡ್ಯ ಕ್ರಿಕೆಟ್​ ಕಮ್​ಬ್ಯಾಕ್​; ಈ ಟೂರ್ನಿಯಲ್ಲಿ ಕಣಕ್ಕೆ!

hardik pandya comeback

ಮುಂಬಯಿ: ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಪಾದದ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಹಾರ್ದಿಕ್​ ಪಾಂಡ್ಯ(Hardik Pandya) ಅವರ ಕ್ರಿಕೆಟ್​ ಕಮ್​ಬ್ಯಾಕ್​ ಇನ್ನೂ ತಡವಾಗಬಹುದು ಎಂದು ಮೂಲವೊಂದು ಮಾಹಿತಿ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಪಾಂಡ್ಯ ಅವರು ಮುಂಬರುವ ಐಪಿಎಲ್​ ವೇಳೆಗೆ ಕ್ರಿಕೆಟ್​ಗೆ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

“ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಟೂರ್ನಿಗೂ ಮುನ್ನ ನಡೆಯುವ ಎಲ್ಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಸದ್ಯ ಅವರು ಚೇತರಿಕೆ ಕಾಣುತ್ತಿದ್ದು ದಕ್ಷಿಣ ಆಫ್ರಿಕಾ ಸರಣಿಯಿಂದಲೂ ಹಿಂದೆ ಸರಿಯಲಿದ್ದಾರೆ” ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಪಾಂಡ್ಯ ಬಲಗಾಲಿನ ಪಾದದ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಟೂರ್ನಿಯಿಂದಲೇ ಹೊರಬಿದಿದ್ದರು. ಸದ್ಯ ಪುನಶ್ಚೇತನ ಶಿಬಿರದಲ್ಲಿರುವ ಪಾಂಡ್ಯ ಸಂಪೂರ್ಣ ಫಿಟ್ ಆಗಲು ದೀರ್ಘ ಸಮಯ ಹಿಡಿಯಲಿದೆ ಎನ್ನಲಾಗಿದೆ. ಹೀಗಾಗಿ ಅವರು 2024ರ ಐಪಿಎಲ್ ಟೂರ್ನಿ ವೇಳೆ ಫಿಟ್ ಆಗಿ ಕ್ರಿಕೆಟ್​ಗೆ ಮರಳುವ ಸಾಧ್ಯತೆಗಳಿವೆ.

ಇದನ್ನು ಓದಿ IND vs AUS T20: ವಿಶ್ವ ಚಾಂಪಿಯನ್ನರಿಗೆ ಸವಾಲೊಡ್ಡೀತೇ ಯಂಗ್​ ಟೀಮ್ ಇಂಡಿಯಾ?

30 ವರ್ಷದ ಪಾಂಡ್ಯ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಈಗಾಗಲೇ ರೋಹಿತ್​ ಮತ್ತು ಕೊಹ್ಲಿ ಅವರನ್ನು ಟಿ20 ಸರಣಿಯಿಂದ ದೂರ ಇರಿಸಲಾಗಿದೆ. ಕಿರಿಯ ಆಟಗಾರರಿಗೆ ಈ ಮಾದರಿಯ ಕ್ರಿಕೆಟ್​ನಲ್ಲಿ ಬಿಸಿಸಿಐ ಮಣೆ ಹಾಕಿದೆ. ಒಟ್ಟಾರೆ ಪಾಂಡ್ಯ ಕಮ್​ಬ್ಯಾಕ್​ ಆದ ಬಳಿಕ ಅವರಿಗೆ ಟಿ20 ನಾಯಕತ್ವ ಒಲಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೌಂಡರಿ ತಡೆಯುವ ಯತ್ನದಲ್ಲಿ ಗಾಯಗೊಂಡಿದ್ದ ಪಾಂಡ್ಯ

ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್​ 19ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದು ಪಾದದ ಗಾಯಕ್ಕೆ ತುತ್ತಾಗಿದ್ದರು. ಬಳಿಕ ನೋವಿನಿಂದಾಗಿ ಮೈದಾನ ತೊರೆದಿದ್ದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದ್ದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್​ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್​ ನಡೆಸಿದ್ದರು. ಬಳಿಕ ಮೂರು ಪಂದ್ಯಗಳಿಂದ ಹೊರಗುಳಿದು ಚಿಕಿತ್ಸೆ ಪಡೆದರೂ ಗಾಯದಿಂದ ಚೇತರಿಕೆ ಕಾಣದ ಕಾರಣ ಅಂತಿಮವಾಗಿ ವಿಶ್ವಕಪ್‌ನಿಂದಲೇ ಹೊರಬಿದ್ದರು. ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕನ್ನಡಿಗ ಪ್ರಸಿದ್ಧ್​ ಕೃಷ್ಣ(prasidh krishna) ತಂಡ ಸೇರಿದ್ದರು.

“ವಿಶ್ವಕಪ್‌ನ ಉಳಿದ ಭಾಗವನ್ನು ನಾನು ಕಳೆದುಕೊಳ್ಳುತ್ತೇನೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೂ ನಾನು ನಮ್ಮ ತಂಡದೊಂದಿಗೆ ಇದ್ದು ಅವರನ್ನು ಹುರಿದುಂಬಿಸುತ್ತೇನೆ. ನನಗೆ ಬೆಂಬಲ ನೀಡಿದ್ದಕ್ಕೆ ಹಾಗೂ ನೀಡುತ್ತಿರುವುದಕ್ಕೆ ಧನ್ಯವಾದಗಳು. ಎಂದು ಟ್ವಿಟರ್​ ಎಕ್ಸ್​ನಲ್ಲಿ ಭಾವುಕ ಪತ್ರವೊಂದನ್ನು ಬರೆದಿದ್ದರು.

Exit mobile version