Site icon Vistara News

t20 Series : ಹಾರ್ದಿಕ್‌ ಅಬ್ಬರಕ್ಕೆ ಬೆಚ್ಚಿ ಬಿದ್ದ ಆಂಗ್ಲರು ಕಡಿಮೆ ಮೊತಕ್ಕೆ ಆಲ್‌ಔಟ್‌, ಭಾರತಕ್ಕೆ ಭರ್ಜರಿ ಜಯ

t20 series

ಸೌತಾಂಪ್ಟನ್‌: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬ್ಯಾಟ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಮಿಂಚಿದರು. ಅವರ ದಿಟ್ಟ ಹೋರಾಟದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ t20 Series ಮೂರು ಪಂದ್ಯಗಳ ಮೊದಲ ಹಣಾಹಣಿಯಲ್ಲಿ ಭಾರತ ಭರ್ಜರಿ ೫೦ ರನ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿತು.

ಆಕರ್ಷಕ ರೀತಿಯಲ್ಲಿ ಬ್ಯಾಟಿಂಗ್‌ ಮಾಡಿದ ಹಾರ್ದಿಕ್‌ ಪಾಂಡ್ಯ ೩೩ ಎಸೆತಗಳಲ್ಲಿ ೫೧ ರನ್‌ ಬಾರಿಸಿದರೆ, ನಾಲ್ಕು ಓವರ್‌ ಎಸೆದು ೩೩ ರನ್‌ ನೀಡಿ ೪ ವಿಕೆಟ್ ಕಬಳಿಸುವ ಮೂಲಕ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸೌತಾಂಪ್ಟನ್‌ನ ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ಕಳೆದುಕೊಂಡು ೧೯೮ ರನ್‌ ಬಾರಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್‌ ಮಾಡಿದ ಆತಿಥೇಯ ಇಂಗ್ಲೆಂಡ್‌ ತಂಡ, ಭಾರತದ ಬೌಲರ್‌ಗಳ ಮೊನಚಿನ ದಾಳಿಗೆ ತತ್ತರಿಸಿ ೧೯.೩ ಓವರ್‌ಗಳಲ್ಲಿ ೧೪೮ ರನ್‌ಗಳಿಗೆ ಆಲ್‌ಔಟ್‌ ಅಯಿತು.

ಹಾರ್ದಿಕ್‌ ಆಧಾರ

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಇಶಾನ್‌ ಕಿಶನ್‌ ೮ ರನ್‌ಗಳಿಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ರೋಹಿತ್‌ ಶರ್ಮ ವೇಗದ ೨೪ ರನ್‌ ಬಾರಿಸಿದರು. ಬಳಿಕ ದೀಪಕ್‌ ಹೂಡಾ ಸ್ಫೋಟಕ ೩೩ ರನ್‌ ಬಾರಿಸಿ ತಂಡದ ರನ್‌ ಗಳಿಕೆಗೆ ವೇಗ ಕೊಟ್ಟರು. ಜತೆಯಾದ ಸೂರ್ಯಕುಮಾರ್‌ ಯಾದವ್‌ ೧೯ ಎಸೆತಗಳಲ್ಲಿ ೩೯ ರನ್‌ ಬಾರಿಸಿ ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡದ ಬ್ಯಾಟಿಂಗ್‌ ಹೀರೊ ಎನಿಸಿಕೊಂಡರು.

ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಇಳಿದ ಹಾರ್ದಿಕ್‌ ಪಾಂಡ್ಯ ಇಂಗ್ಲೆಂಡ್‌ ಬೌಲರ್‌ಗಳನ್ನು ಸತತವಾಗಿ ದಂಡಿಸಿ ಅರ್ಧ ಶತಕ ಬಾರಿಸಿದರು. ಅಕ್ಷರ್‌ ಪಟೇಲ್‌ ೧೭ ಹಾಗೂ ದಿನೇಶ್‌ ಕಾರ್ತಿಕ್‌ ೧೧ ರನ್‌ಗಳ ಕೊಡುಗೆ ಕೊಟ್ಟರು.

ಭುವಿ, ಪಾಂಡ್ಯ ನಿಖರ ಬೌಲಿಂಗ್‌

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಭುವನೇಶ್ವರ್‌ ಕುಮಾರ್‌ (೧೦ ರನ್‌ಗಳಿಗೆ ೧ ವಿಕೆಟ್‌) ಹಾಗೂ ಹಾರ್ದಿಕ್‌ ಪಾಂಡ್ಯ ಆಘಾತ ನೀಡಿದರು. ಇವರಿಬ್ಬರ ಬೌಲಿಂಗ್‌ ನಿಖರತೆಗೆ ಇಂಗ್ಲೆಂಡ್‌ ತಂಡ ೩೩ ರನ್‌ ಗಳಿಸುವಷ್ಟರಲ್ಲಿ ೪ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಹಿನ್ನಡೆಗೆ ಒಳಗಾದ ಇಂಗ್ಲೆಂಡ್‌ ಅ ಬಳಿಕ ಚೇತರಿಸಿಕೊಳ್ಳಲಿಲ್ಲ. ಏತನ್ಯಧ್ಮೆ, ಯುವ ಆಟಗಾರ ಹ್ಯಾರಿ ಬ್ರೂಕ್‌ (೨೮) ಹಾಗೂ ಮೊಯೀನ್‌ ಅಲಿ (೩೬) ಆತಿಥೇಯ ಬಳಗಕ್ಕೆ ನೆರವಾಗಲು ಯತ್ನಿಸಿದರು. ಕೊನೆಯಲ್ಲಿ ಕ್ರಿಸ್‌ ಜೋರ್ಡಾನ್‌ ೨೬ ರನ್‌ ಬಾರಿಸಿದರು. ಆದಾಗ್ಯೂ ೧೪೦ ರನ್‌ ಕಲೆಹಾಕುವಷ್ಟರಲ್ಲಿ ಸರ್ವಪತನ ಕಂಡಿತು. ಯಜ್ವೇಂದ್ರ ಚಹಲ್‌ ೨ ಹಾಗೂ ಹರ್ಷಲ್‌ ಪಟೇಲ್‌ ೧ ವಿಕೆಟ್‌ ತಮ್ಮದಾಗಿಸಿಕೊಂಡರು.

ಸ್ಕೋರ್‌ ವಿವರ

ಭಾರತ: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೯೮ ( ಹಾರ್ದಿಕ್‌ ಪಾಂಡ್ಯ ೫೧, ಸೂರ್ಯಕುಮಾರ್‌ ಯಾದವ್‌ ೩೯, ದೀಪಕ್‌ ಹೂಡ ೩೩, ರೋಹಿತ್‌ ಶರ್ಮ ೨೪; ಮೊಯೀನ್‌ ಅಲಿ ೨೬ಕ್ಕೆ೨, ಕ್ರಿಸ್‌ ಜೋರ್ಡಾನ್‌ ೨೩ಕ್ಕೆ೨).

ಇಂಗ್ಲೆಂಡ್‌: ೧೯.೩ ಓವರ್‌ಗಳಲ್ಲಿ ೧೪೮ (ಮೊಯೀನ್‌ ಅಲಿ ೩೬, ಹ್ಯಾರಿ ಬ್ರೂಕ್‌ ೨೮, ಕ್ರಿಸ್‌ ಜೋರ್ಡಾನ್‌ ೨೬; ಹಾರ್ದಿಕ್‌ ಪಾಂಡ್ಯ ೩೩ಕ್ಕೆ೪, ಅರ್ಶ್‌ದೀಪ್‌ ಸಿಂಗ್‌ ೧೮ಕ್ಕೆ ೨, ಯಜ್ವೇಂದ್ರ ಚಹಲ್‌ ೩೨ಕ್ಕೆ೨).

ಇದನ್ನೂ ಓದಿ: ಶ್ರೀಲಂಕಾ ಮಹಿಳೆಯರು Whitewash, ಭಾರತದ ವನಿತೆಯರಿಗೆ ಭರ್ಜರಿ ಜಯ

Exit mobile version